×
Ad

ರಾಜಧಾನಿ ಸ್ಫೋಟ: 10 ಮಂದಿಯ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ

Update: 2016-05-17 23:23 IST

ಹೊಸದಿಲ್ಲಿ, ಮೇ 17: ದೇಶಾದ್ಯಂತ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸರಣಿ ಸ್ಫೋಟ ಸಂಭವಿಸಿದ ಎರಡು ದಶಕಗಳ ಬಳಿಕ, ಸುಪ್ರೀಂಕೋರ್ಟ್, ಈ ಸಂಬಂಧ ಆರೋಪ ಎದುರಿಸುತ್ತಿದ್ದ ಹತ್ತು ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದು, ಇತರ ನಾಲ್ವರನ್ನು ದೋಷಮುಕ್ತಗೊಳಿಸಿದೆ.

ಎಪ್.ಎಂ.ಐ.ಖಲೀಫುಲ್ಲಾ ಹಾಗೂ ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ, 1993ರ ಈ ಅಪರಾಧ ಪ್ರಕರಣದಲ್ಲಿ, ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜಕರು ಯಶಸ್ವಿಯಾಗಿದ್ದಾರೆ ಎಂದು ಘೋಷಿಸಿತು.
ಭಯೋತ್ಪಾದನೆ ಹಾಗೂ ವಿಧ್ವಂಸಕ ಕೃತ್ಯಗಳ ತಡೆ ಕಾಯ್ದೆ ಪ್ರಕರಣಗಳ ವಿಚಾರಣೆಯ ನಿಯೋಜಿತ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ 16 ಆರೋಪಿಗಳ ಪೈಕಿ 14 ಮಂದಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 16 ಆರೋಪಿಗಳ ಪೈಕಿ ಒಬ್ಬ ತಪ್ಪಿಸಿಕೊಂಡಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು. ಮತ್ತೊಬ್ಬ ಆರೋಪಿ ಈ ಅಪರಾಧದ ವೇಳೆ ಬಾಲಾಪರಾಧಿ ಎಂದು ಸಮರ್ಥಿಸಿಕೊಂಡಿದ್ದ.
ಸ್ಫೋಟಗಳು: ದೇಶಾದ್ಯಂತ ಆರು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ 1993ರ ಡಿಸೆಂಬರ್ 5ರಿಂದ 6ರ ಅವಧಿಯಲ್ಲಿ ಬಾಂಬ್‌ಸ್ಫೋಟಗಳು ಸಂಭವಿಸಿದ್ದವು. ಬಾಬರಿ ಮಸೀದಿ ಧ್ವಂಸದ ಮೊದಲ ವಾರ್ಷಿಕೋತ್ಸವದ ಸಂದಭರ್ದಲ್ಲಿ ನಡೆಸಿದ ಈ ಘಟನೆಗಳಲ್ಲಿ ಇಬ್ಬರು ಮೃತಪಟ್ಟು, ಇತರ ಹಲವು ಮಂದಿ ಗಾಯಗೊಂಡಿದ್ದರು.
ಈ ಅಪರಾಧಗಳ ಬಗ್ಗೆ ಇಬ್ಬರು ಆರೋಪಿಗಳು ತಪ್ಪೊಪ್ಪಿಗೆಗೆ ಮುಂದಾದ ಹಿನ್ನೆಲೆಯಲ್ಲಿ ಎರಡು ದಶಕಗಳ ಈ ಪ್ರಕರಣವನ್ನು ಭೇದಿಸಲಾಗಿತ್ತು. ಪೊಲೀಸರ ಒತ್ತಡದಿಂದಾಗಿ ತಪ್ಪೊಪ್ಪಿಗೆ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಗಳ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಯು.ಯು.ಲಲಿತ್ ಅವರು, ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.
ತಪ್ಪೊಪ್ಪಿಗೆ ಹೇಳಿಕೆ ನೀಡಿದವರು ಕಾನೂನು ಬದ್ಧವಾಗಿಯೇ ಪ್ರಕ್ರಿಯೆ ನಡೆಸಿದ್ದಾರೆ. ತನಿಖೆಯ ಅವಧಿಯಲ್ಲಿ ಸಾಕ್ಷಿಗಳು ಕೂಡಾ ಈ ತಪ್ಪೊಪ್ಪಿಗೆಗೆ ಪೂರಕವಾದ ಪುರಾವೆಗಳನ್ನು ನೀಡಿದ್ದನ್ನು ನ್ಯಾಯಾಲಯ ಪರಿಗಣಿಸಿದೆ. ಈ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದ್ದು, ಮೇಲ್ಮನವಿ ಹಂತದ ಸಾಕ್ಷಿಗಳಾಗಿಯೂ ಪರಿಗಣಿಸಲಾಗಿದೆ. ಒಂದು ತಪ್ಪೊಪ್ಪಿಗೆ ಹೇಳಿಕೆ ಮತ್ತೊಂದಕ್ಕೆ ತಾಳೆಯಾಗುತ್ತಿದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News