×
Ad

ಕುಡಿಯುವ ನೀರು ಪ್ರಯೋಗಾಲಯ ಸ್ಥಾಪನೆ ಅವ್ಯವಹಾರ: ಏಳು ಅಧಿಕಾರಿಗಳ ಅಮಾನತು

Update: 2016-05-17 23:58 IST

ಬೆಂಗಳೂರು, ಮೇ 17: ಕುಡಿಯುವ ನೀರು ಪ್ರಯೋಗಾಲಯ ಸ್ಥಾಪನೆಯಲ್ಲಿ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಏಳುಮಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಸಹಾಯಕ ಇಂಜಿನಿಯರ್ ಶ್ರೀಕಾಂತ್, ಎಇಇ ವಿ.ರಾಜು, ಲೆಕ್ಕಾಧೀಕ್ಷಕ ನಾಗೇಶ್ವರರಾವ್, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ರಮೇಶ್, ಹನುಮ ಮೂರ್ತಿ, ಕೌಸರ್‌ಪರ್ವೀನ್, ನಟೇಶ್‌ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಇದಲ್ಲದೆ, ಪ್ರಯೋಗಾಲಯಗಳ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡಿದ ಮುಖ್ಯ ಇಂಜಿನಿಯರ್‌ಗಳಾದ ಜೆ.ಪಿ.ರೆಡ್ಡಿ ಮತ್ತು ಆರ್.ಪಿ.ಕುಲಕರ್ಣಿ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಅಪರ ಮುಖ್ಯಕಾರ್ಯದರ್ಶಿಗೆ ಎಚ್.ಕೆ.ಪಾಟೀಲ್ ಸೂಚನೆ ನೀಡಿದ್ದಾರೆ.

ರಾಜ್ಯದ 140 ತಾಲೂಕುಗಳಲ್ಲಿ ಕುಡಿಯುವ ನೀರು ಪ್ರಯೋಗಾಲಯ ಸ್ಥಾಪನೆಯಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೊಪ್ಪಿಸಿದ್ದ ಸಚಿವರು, ಇದೀಗ ತಪ್ಪಿತಸ್ಥರನ್ನು ಸೇವೆಯಿಂದ ಅಮಾನತು ಮಾಡುವ ತೀರ್ಮಾನ ಕೈಗೊಂಡಿದ್ದಾರೆ.

ರಾಜ್ಯದ ವಿವಿಧ ತಾಲೂಕುಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 80 ಪ್ರಯೋಗಾಲಯಗಳ ಟೆಂಡರ್ ಪ್ರಕ್ರಿಯೆ ದೋಷಪೂರಿತವಾಗಿದ್ದು ಅದನ್ನು ರದ್ದುಗೊಳಿಸುವ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಒಂದು ವಾರದಲ್ಲಿ ವರದಿ ಮಂಡಿಸಲು ಅಪರ ಮುಖ್ಯಕಾರ್ಯದರ್ಶಿಗೆ ಎಚ್.ಕೆ.ಪಾಟೀಲ್ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News