ಸ್ವಚ್ಛ ಭಾರತ ಅಭಿಯಾನ:ಶೀಘ್ರವೇ ರಾಷ್ಟ್ರೀಯ ಸಹಾಯವಾಣಿ ಸ್ಥಾಪನೆ

Update: 2016-05-18 14:20 GMT

ಹೊಸದಿಲ್ಲಿ,ಮೇ 18: ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಶೇ.100ರಷ್ಟು ಬಯಲು ಶೌಚ ಮುಕ್ತ ಗುರಿಯನ್ನು ಸಾಧಿಸಲು ದೇಶಾದ್ಯಂತದ 4000ಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳಿಗೆ ನೆರವಾಗಲು ರಾಷ್ಟ್ರಮಟ್ಟದ ದೂರವಾಣಿ ಸಹಾಯವಾಣಿ ಶೀಘ್ರವೇ ಕಾರ್ಯಾರಂಭಗೊಳ್ಳಲಿದೆ.

ನಾಲ್ಕು ಅಂಕಿಗಳ ಈ ಸಹಾಯವಾಣಿಯು ಸ್ವಚ್ಛ ಭಾರತ ಅಭಿಯಾನಕ್ಕೆ ಸಂಬಂಧಿಸಿದಂತೆ ಜನರಿಗೆ ನೆರವನ್ನು ಒದಗಿಸಲಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ತಿಳಿಸಿದರು.

ಎಲ್ಲ 4,041 ಸ್ಥಳೀಯ ಸಂಸ್ಥೆಗಳು ನಾಲ್ಕಂಕಿಗಳ ಸ್ವಚ್ಛ ಭಾರತ ಸಹಾಯವಾಣಿಯನ್ನು ನಿರ್ವಹಿಸಲಿವೆ. ಸಹಾಯವಾಣಿ ಸಂಖ್ಯೆ ಸೇರಿದಂತೆ ಅನುಸರಿಸಬೇಕಾದ ವಿಧಿವಿಧಾನಗಳ ಬಗ್ಗೆ ದೂರಸಂಪರ್ಕ ಸಚಿವಾಲಯದೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.

ಸ್ವಚ್ಛ ಭಾರತ ಅಭಿಯಾನದ ಕುರಿತು ಜನರಲ್ಲಿ ಅರಿವನ್ನು ಮೂಡಿಸುವಲ್ಲಿ ಸಹಾಯವಾಣಿಯು ನೆರವಾಗಲಿದೆ. ಶೌಚಾಲಯಗಳ ನಿರ್ಮಾಣ ಸೇರಿದಂತೆ ಎಲ್ಲ ಬಗೆಯ ನೆರವನ್ನು ಪಡೆಯಲು ಜನರಿಗೆ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

 ಸ್ವಚ್ಛ ಭಾರತ ಕುರಿತಂತೆ ಮುಂದಿನ ತಿಂಗಳಿನಿಂದ ಮಾಧ್ಯಮಗಳ ಮೂಲಕ ಬೃಹತ್ ಅಭಿಯಾನವೊಂದನ್ನು ಆರಂಭಿಸುವ ಬಗ್ಗೆಯೂ ಸರಕಾರವು ಪರಿಶೀಲಿಸುತ್ತಿದೆ. ಮೇ16ರಿಂದ 31ರವರೆಗೆ ಎಲ್ಲ ಸರಕಾರಿ ಕಚೇರಿಗಳು ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದು, ವರ್ಷಗಳಿಂದಲೂ ಕಚೇರಿಗಳಲ್ಲಿ ರಾಶಿ ಬಿದ್ದಿರಬಹುದಾದ ಅನುಪಯುಕ್ತ ವಸ್ತುಗಳು ಮತ್ತು ಹಳೆಯ ಕಡತಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News