ಮಧ್ಯಪ್ರದೇಶ: 10ನೆ ತರಗತಿಯಲ್ಲಿ ಅನುತ್ತೀರ್ಣರಾದ 5 ವಿದ್ಯಾರ್ಥಿಗಳು ಆತ್ಮಹತ್ಯೆ
ಭೋಪಾಲ್, ಮೇ 18: ಮಧ್ಯಪ್ರದೇಶದಲ್ಲಿ 10ನೆ ತರಗತಿ ಫಲಿತಾಂಶ ಪ್ರಕಟವಾದ 25 ಗಂಟೆಗಳಲ್ಲೇ, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಐದು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ.
ಭೋಪಾಲ್‌ನಲ್ಲಿ ಇಬ್ಬರು ಹಾಗೂ ಸಾಗರ್, ಸಾತ್ನಾ ಹಾಗೂ ರೇವಾದಲ್ಲಿ ತಲಾ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೂಜಾ ಶಿಂಧೆ (16) ಎಂಬ ವಿದ್ಯಾರ್ಥಿನಿ ಭೋಪಾಲ್‌ನ ಶಹಜಹನಾಬಾದ್‌ನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಫಲಿತಾಂಶ ಪ್ರಕಟವಾದ ಬಳಿಕ ಆಕೆ ಯಾರೊಂದಿಗೂ ಮಾತನಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸೋಮವಾರ ಫಲಿತಾಂಶ ಪ್ರಕಟವಾಗಿದ್ದು, ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಯಾವುದೇ ಆತ್ಮಹತ್ಯೆ ಟಿಪ್ಪಣಿ ಇಟ್ಟಿಲ್ಲ. ಆದರೆ ಆಕೆಯ ತಂದೆಯ ಪ್ರಕಾರ ಫಲಿತಾಂಶದಿಂದ ಹತಾಶಳಾಗಿ ಈ ನಿರ್ಧಾರಕ್ಕೆ ಬಂದಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಜೈಪ್ರಕಾಶ್ ಸಿಂಗ್ ವಿವರಿಸಿದ್ದಾರೆ.
ಭೋಪಾಲ್‌ನ ಬೈರಾಸಿಯಾ ಪ್ರದೇಶದಲ್ಲಿ ಇದೇ ಕಾರಣಕ್ಕೆ 18 ವರ್ಷದ ಒಬ್ಬ ವಿದ್ಯಾರ್ಥಿ ಪಲಿತಾಂಶ ನೋಡಿದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜೇಶ್ ಪಟೇಲ್ ತಾನು ಅನುತ್ತೀರ್ಣನಾದ ಸುದ್ದಿ ತಿಳಿಯುತ್ತಿದ್ದಂತೆ ಮನೆಯಿಂದ ಹೊರಬಂದು ವಿಷ ಸೇವಿಸಿದ. ಮನೆಗೆ ಬರುವ ವೇಳೆಗೆ ವಾಂತಿ ಮಾಡಿಕೊಳ್ಳುತ್ತಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಮೃತಪಟ್ಟ.
ಸಾಗರ್‌ನಲ್ಲಿ 16 ವರ್ಷದ ಪ್ರವೀಣ್ ರಜಕ್ ಎಂಬ ವಿದ್ಯಾರ್ಥಿ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದರೆ, ರೇವಾದಲ್ಲಿ 16 ವರ್ಷದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 17 ವರ್ಷದ ಮತ್ತೊಬ್ಬ ವಿದ್ಯಾರ್ಥಿ ರಾಹುಲ್ ಗಿರಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.