ಹಣಕಾಸು ಗುರಿ ಪರಾಮರ್ಶೆಗೆ ಐದು ಮಂದಿಯ ಸಮಿತಿ ರಚನೆ

Update: 2016-05-18 18:24 GMT

ಹೊಸದಿಲ್ಲಿ, ಮೇ 18: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಚಂಚಲತೆ ಮತ್ತು ವಿತ್ತೀಯ ಕ್ರೋಡೀಕರಣದ ಅವಳಿ ಸವಾಲುಗಳನ್ನು ಎದುರಿಸುತ್ತಿರುವ ಕೇಂದ್ರ ಸರಕಾರ ತನ್ನ ಹಣಕಾಸು ಗುರಿಗಳ ಪರಾಮರ್ಶೆ ನಡೆಸಲು ಐದು ಮಂದಿ ತಜ್ಞರ ಸಮಿತಿಯನ್ನು ನೇಮಕ ಮಾಡಿದೆ.
ಕಂದಾಯ ಹಾಗೂ ವೆಚ್ಚ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎನ್.ಕೆ.ಸಿಂಗ್ ನೇತೃತ್ವದ ಈ ಸಮಿತಿಯು ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಅಥವಾ ಎಫ್‌ಆರ್‌ಬಿಎಂ ಕಾಯ್ದೆಯ ಪರಾಮರ್ಶೆ ನಡೆಸಲಿದೆ. ಇದರ ಜತೆಗೆ ಸ್ಥಿತಿಸ್ಥಾಪಕತ್ವ ಹೊಂದಿದ ವಿತ್ತೀಯ ಗುರಿಗಳ ಪರಾಮರ್ಶೆಯನ್ನೂ ನಡೆಸಲಿದೆ.
ಈ ಸಮಿತಿಯಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣ್ಯನ್, ಮಾಜಿ ಹಣಕಾಸು ಕಾರ್ಯದರ್ಶಿ ಸುಮಿತ್ ಬೋಸ್, ಆರ್‌ಬಿಐ ಉಪ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಪ್ ಪಬ್ಲಿಕ್ ಪೈನಾನ್ಸ್ ಆ್ಯಂಡ್ ಪಾಲಿಸಿ ಸಂಸ್ಥೆಯ ನಿರ್ದೇಶಕ ರಥಿನ್ ರಾಯ್ ಸದಸ್ಯರಾಗಿ ಇರುತ್ತಾರೆ. ಎನ್.ಕೆ.ಸಿಂಗ್ ಅವರು ಹಿರಿಯ ಅಧಿಕಾರಿಯಾಗಿ ನಿವೃತ್ತರಾದ ಬಳಿಕ ಜೆಡಿಯು ಸೇರಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರಿ ಸಂಸದರಾಗಿದ್ದರು. ಅವರಿಗೆ ಈ ಹೊಣೆಗಾರಿಕೆ ಅತ್ಯಂತ ಸವಾಲಿನದ್ದಾಗಿದೆ.
ಕಳೆದ ವರ್ಷ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಇಂಥ ಸಮಿತಿ ನೇಮಕ ಮಾಡುವ ಯೋಚನೆಯನ್ನು ಪ್ರಕಟಿಸಿದ್ದರು. ಹಣಕಾಸು ಗುರಿಗಳ ಪರಾಮರ್ಶೆ ಜತೆಗೆ ವಿತೀಯ ಕೊರತೆ ಪ್ರಮಾಣ ಹಾಗೂ ಗುರಿಗಳ ಪರಾಮರ್ಶೆ ನಡೆಸುವುದು ಕೂಡಾ ಈ ಸಮಿತಿಯ ಕಾರ್ಯವಾಗಿದೆ. 2016-17ನೆ ಹಣಕಾಸು ವರ್ಷದಲ್ಲಿ ಸರಕಾರ ದೇಶದ ಜಿಡಿಪಿಯ ಶೇ. 3.5ರ ಮಟ್ಟಕ್ಕೆ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ನಿರ್ಧರಿಸಿದೆ.
ಅಗತ್ಯ ಬಿದ್ದರೆ ಸಮಿತಿಗೆ ಹೆಚ್ಚುವರಿ ಹೊಣೆಯನ್ನೂ ಹೊರಿಸಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ. ಸಮಿತಿಯು ಮಾರುಕಟ್ಟೆ ಸೂಚಕರು, ಸರಕಾರದ ಸಾಲ ಸ್ಥಿತಿಗತಿ, ಭಾರತದ ಸಾಲ ಮಾರುಕಟ್ಟೆ, ಕುಟುಂಬವಾರು ಬಳಕೆ ಹಾಗೂ ಉಳಿತಾಯ, ಬ್ಯಾಂಕ್ ಸಾಲ, ಕೇಂದ್ರ- ರಾಜ್ಯಗಳ ವೆಚ್ಚ, ಹಾಲಿ ಇರುವ ಪ್ರವೃತ್ತಿಗಳು, ಜಾಗತಿಕ ಆರ್ಥಿಕತೆ, ತೆರಿಗೆ ಆದಾಯ ನಿರೀಕ್ಷೆ ಹಾಗೂ ಒಟ್ಟಾರೆ ಆರ್ಥಿಕ ವ್ಯವಸ್ಥೆಯ ಸ್ಥಿತಿಗತಿಗಳು ಮತ್ತು ಜಾಗತಿಕ ಪ್ರಗತಿ ಭವಿಷ್ಯದ ಬಗ್ಗೆಯೂ ಗಮನ ಹರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News