ಚುನಾವಣೆ: ಮೂರು ರಾಜ್ಯಗಳಲ್ಲಿ 141 ಕೋಟಿ ರೂ. ವಶ

Update: 2016-05-18 18:25 GMT

ಚೆನ್ನೈ, ಮೇ 18: ಚುನಾವಣಾ ಆಯೋಗ ತಮಿಳುನಾಡಿನಲ್ಲಿ 110 ಕೋಟಿ ರೂ., ಕೇರಳದಲ್ಲಿ 24 ಕೋಟಿ ರೂ. ಹಾಗೂ ಪುದುಚೇರಿಯಲ್ಲಿ ಏಳು ಕೋಟಿ ರೂಪಾಯಿ ಅಕ್ರಮ ಹಣವನ್ನು ಚುನಾವಣೆ ಸಂದರ್ಭದಲ್ಲಿ ನಡೆಸಿದ ದಾಳಿಗಳಲ್ಲಿ ವಶಪಡಿಸಿಕೊಂಡಿದೆ ಎಂದು ಆಯೋಗ ಪ್ರಕಟಿಸಿದೆ.

ಇದರ ಜತೆಗೆ 1.83 ಲಕ್ಷ ಲೀಟರ್ ಅಕ್ರಮ ಮದ್ಯವನ್ನೂ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ. ತಮಿಳುನಾಡಿನಲ್ಲಿ ವಶಪಡಿಸಿಕೊಂಡ 110 ಕೋಟಿ ರೂಪಾಯಿಗಳ ಪೈಕಿ 48 ಕೋಟಿ ರೂಪಾಯಿಗಳನ್ನು ಸಮರ್ಪಕ ದಾಖಲೆ ಸಲ್ಲಿಸಿದ ಬಳಿಕ ವಾಪಸು ನೀಡಲಾಗಿದೆ. ಉಳಿದ ಹಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಹೇಳಿದ್ದಾರೆ.
ಒಟ್ಟು 204 ಕೆ.ಜಿ. ಬೆಳ್ಳಿ ಹಾಗೂ 26.35 ಕೆ.ಜಿ ಚಿನ್ನವನ್ನೂ ತಮಿಳುನಾಡಿನಲ್ಲಿ ವಶಪಡಿಸಿಕೊಳ್ಳಲಾಗಿದೆ. ಪುದುಚೇರಿಯಲ್ಲಿ ವಶಪಡಿಸಿಕೊಂಡ 6.57 ಕೋಟಿ ರೂಪಾಯಿ ಪೈಕಿ 4.49 ಕೋಟಿ ರೂಪಾಯಿ ಸಮರ್ಪಕ ದಾಖಲೆ ಒದಗಿಸಿದ ಕಾರಣದಿಂದ ವಾಪಸು ಮಾಡಲಾಗಿದೆ ಎಂದು ವಿವರಿಸಿದ್ದಾರೆ.
ಪುದುಚೇರಿಯಲ್ಲಿ 14 ಸಾವಿರಲೀಟರ್ ಅಕ್ರಮ ಮದ್ಯ ಹಾಗೂ ಕೆಲ ಗೃಹಬಳಕೆ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಕೇರಳದಲ್ಲಿ 24 ಕೋಟಿ ರೂ. ನಗದು ಹಾಗೂ 50 ಸಾವಿರ ಲೀಟರ್ ಮದ್ಯ, 520 ಕೆ.ಜಿ.ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ನಿರ್ದೇಶಕ ಜನರಲ್ ಸುದೀಪ್ ಜೈನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News