ಕರ್ಕರೆ ನೆನಪಿಗೆ ಅವಮಾನ: ಮಾಜಿ ಪೊಲೀಸ್ ಕಮಿಷನರ್ ಕಿಡಿ

Update: 2016-05-18 18:25 GMT

ಮುಂಬೈ, ಮೇ 18: ಮಾಲೆಗಾಂವ್‌ನಲ್ಲಿ 2008ರಲ್ಲಿ ನಡೆದ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಠಾಕೂರ್ ಹಾಗೂ ಇತರರ ವಿರುದ್ಧದ ಆರೋಪವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕೈಬಿಡಲು ನಿರ್ಧರಿಸಿದ ಬಳಿಕ, ಈ ಪ್ರಕರಣದ ತನಿಖೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಹೇಮಂತ್ ಕರ್ಕರೆ ಅವರು ನಿರ್ವಹಿಸಿದ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿರುವುದು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೆರಳಿಸಿದೆ.

ಹೇಮಂತ್ ಕರ್ಕರೆ ನವೆಂಬರ್ 26ರ ಮುಂಬೈ ಭಯೋತ್ಪಾದಕ ದಾಳಿ ವೇಳೆ ಮೃತಪಟ್ಟಿದ್ದರು. ಇದೀಗ ಠಾಕೂರ್ ಹಾಗೂ ಇತರರ ವಿರುದ್ಧದ ಆರೋಪವನ್ನು ಕೈಬಿಡಲು ನಿರ್ಧರಿಸಿರುವುದು ಅವರ ಸ್ಮರಣೆಗೆ ಮಾಡುವ ಅವಮಾನ ಎಂದು ಮುಂಬೈನ ನಿವೃತ್ತ ಪೊಲೀಸ್ ಕಮಿಷನರ್ ಜ್ಯೂಲಿಯೊ ರಿಬೆರಿಯೊ ಕಿಡಿ ಕಾರಿದ್ದಾರೆ.

ಎನ್‌ಡಿಟಿವಿಯ ‘ವಾಕ್ ದ ಟಾಕ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ಕರೆ ಅವರು ಪ್ರಜ್ಞಾ ಠಾಕೂರ್ ಹಾಗೂ ಕರ್ನಲ್ ಶ್ರೀಕಾಂತ್ ಪುರೋಹಿತ್ ವಿರುದ್ಧ ಕೆಲ ಪುರಾವೆಗಳನ್ನು ಹುಟ್ಟುಹಾಕಿದ್ದಾರೆ ಹಾಗೂ ಸುಳ್ಳು ವರದಿ ನೀಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

ಏಕೆಂದರೆ ತಮ್ಮನ್ನು ಸಮರ್ಥಿಸಿಕೊಳ್ಳಲು ಇಂದು ಕರ್ಕರೆ ಇಲ್ಲ. ಅವರನ್ನು ನಾವು ಸಮರ್ಥಿಸುತ್ತೇವೆ ಎಂದು ಪಂಜಾಬ್ ಹಾಗೂ ಗುಜರಾತ್‌ನಲ್ಲೂ ದಶಕಗಳ ಕಾಲ ಸೇವೆ ಸಲ್ಲಿಸಿದ ಅವರು ಭಾವುಕರಾಗಿ ನುಡಿದರು.

ಕರ್ಕರೆ ವಿರುದ್ಧದ ಆರೋಪ ಮುಂಬೈ ಪೊಲೀಸರನ್ನು ಕಂಗೆಡಿಸಿದೆ. ಅವರು ಕರ್ಕರೆ ಅವರನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರು ಮೃತಪಟ್ಟ ಬಳಿಕ ಕೂಡಾ ಈ ಎಲ್ಲರೂ ಕರ್ಕರೆ ಜತೆ ಭಾವನಾತ್ಮಕವಾಗಿ ಇದ್ದಾರೆ ಎಂದು ಬಣ್ಣಿಸಿದರು.

ಮಾಲೆಗಾಂವ್ ಸ್ಫೋಟದ ತನಿಖೆ ನಡೆಸಿದ್ದ ಕರ್ಕರೆ ನವೆಂಬರ್ 26ರ ಭಯೋತ್ಪಾದಕ ದಾಳಿಯಲ್ಲಿ ಹತರಾಗಿದ್ದರು. ಮಹಾರಾಷ್ಟ್ರ ಭಯೋತ್ಪಾದಕ ವಿರೋಧಿ ಪಡೆಯ ಮುಖ್ಯಸ್ಥರಾಗಿದ್ದ ಕರ್ಕರೆ, ಮೊಟ್ಟಮೊದಲ ಬಾರಿಗೆ 2008ರ ಸೆಪ್ಟಂಬರ್ 29ರಂದು ನಡೆದ ಸ್ಫೋಟದ ಬಗ್ಗೆ ತನಿಖೆ ಕೈಗೊಂಡರು. ಈ ಘಟನೆಯಲ್ಲಿ ಆರು ಮಂದಿ ಮೃತಪಟ್ಟು, 101 ಮಂದಿ ಗಾಯಗೊಂಡಿದ್ದರು.


ಹಿಂದೂ ಪರ ಸಂಘಟನೆ ಅಭಿನವ್ ಭಾರತ್ ಜತೆ ಕೈಜೋಡಿಸಿದ್ಧ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾ ಹಾಗೂ ಇತರರನ್ನು ಈ ಘಟನೆ ಸಂಬಂಧ ಬಂಧಿಸಲಾಗಿತ್ತು.

ಕರ್ಕರೆ ಅವರು ಸಾಧ್ವಿ ಪ್ರಜ್ಞಾ ಹಾಗೂ ಕರ್ನಲ್ ಶ್ರೀಕಾಂತ್ ಪುರೋಹಿತ್ ವಿರುದ್ಧ ಕೆಲ ಪುರಾವೆಗಳನ್ನುಹುಟ್ಟುಹಾಕಿದ್ದಾರೆ ಹಾಗೂ ಸುಳ್ಳು ವರದಿ ನೀಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿ ರುವುದು ಖಂಡನೀಯ. ಏಕೆಂದರೆ ತಮ್ಮನ್ನು ಸಮರ್ಥಿಸಿಕೊಳ್ಳಲು ಇಂದು ಕರ್ಕರೆ ಇಲ್ಲ. ಅವರನ್ನು ನಾವು ಸಮರ್ಥಿಸುತ್ತೇವೆ.
- ಜ್ಯೂಲಿಯೊ ರಿಬೆರಿಯೊ, ಮುಂಬೈನ ನಿವೃತ್ತ ಪೊಲೀಸ್ ಕಮಿಷನರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News