ಮುಂದುವರಿದ ನೀಟ್ ಗೊಂದಲ: ಪರೀಕ್ಷೆ ಒಂದು ವರ್ಷ ಮುಂದಕ್ಕೆ

Update: 2016-05-18 18:29 GMT

ಕೇಂದ್ರದಿಂದ ಸುಗ್ರೀವಾಜ್ಞೆಗೆ ನಿರ್ಧಾರ

ಹೊಸದಿಲ್ಲಿ, ಮೇ 18: ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ (ಎನ್‌ಇಇಟಿ) ವಿವಾದದಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶಿಸಿದ್ದು, ಪರೀಕ್ಷೆಯನ್ನು ಒಂದು ವರ್ಷದ ಕಾಲ ಮುಂದೂಡುವ ಸಂಬಂಧ ಸುಗ್ರೀವಾಜ್ಞೆ ಅಥವಾ ಎಕ್ಸಿಕ್ಯೂಟಿವ್ ಆದೇಶ ಹೊರಡಿಸಲು ನಿರ್ಧರಿಸಿದೆ.

ರಾಜ್ಯ ಸರಕಾರಗಳು ಹಾಗೂ ರಾಜ್ಯಗಳ ಸಂಸ್ಥೆಗಳಿಗೆ ಒಂದು ವರ್ಷಕ್ಕೆ ನೀಟ್‌ನಿಂದ ವಿನಾಯಿತಿ ನೀಡಲು ಕೇಂದ್ರ ನಿರ್ಧರಿಸಿದ್ದಾಗಿ ಝೀ ನ್ಯೂಸ್ ವರದಿ ಮಾಡಿದೆ.

ಆದರೆ ಕೇಂದ್ರ ಸರಕಾರಿ ಹಾಗೂ ಖಾಸಗಿ ಆಡಳಿತ ಮಂಡಳಿಗಳ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಕೋಟಾದಡಿ ಪ್ರವೇಶ ಬಯಸುವ ವಿದ್ಯಾರ್ಥಿ ಆಕಾಂಕ್ಷಿಗಳಿಗೆ ಈ ಪರೀಕ್ಷೆ ಪ್ರಸಕ್ತ ವರ್ಷದಿಂದಲೇ ಅನ್ವಯ ವಾಗುತ್ತದೆ ಎಂದು ಎನ್‌ಡಿಟಿವಿ ವರದಿವಿವರಿಸಿದೆ.

ಮೇ 1ರಂದು ನಡೆದ ನೀಟ್ ಮೊದಲ ಹಂತದ ಪರೀಕ್ಷೆಯಲ್ಲಿ 6.5 ಲಕ್ಷ ಮಂದಿ ಭಾಗವಹಿಸಿದ್ದರು. ಎರಡನೆ ಹಂತದ ಪರೀಕ್ಷೆ ಜುಲೈ 24ರಂದು ನಡೆಯಲಿದೆ.

ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನವನ್ನು ಒಂದು ವರ್ಷ ಕಾಲ ಮುಂದಕ್ಕೆ ಹಾಕುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸರಕಾರ ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಸುಪ್ರೀಂಕೋರ್ಟ್‌ನ ಈ ತೀರ್ಪಿ ನಿಂದಾಗಿ ರಾಜ್ಯಗಳು ತಮ್ಮ ರಾಜ್ಯಗಳಿಗೆ ಸೀಮಿತವಾಗುವಂತೆ ತಮ್ಮದೇ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಿಲ್ಲ ಹಾಗೂ ಎನ್‌ಇಇಟಿ ಆಧಾರದಲ್ಲೇ ಪ್ರವೇಶ ನೀಡಬೇಕಾಗುತ್ತದೆ.

 ಆದರೆ ನೀಟ್ ಅನ್ವಯಿಕೆ ಮುಂದೂಡಲು ಸುಗ್ರೀವಾಜ್ಞೆ ಸಾಕೇ ಅಥವಾ ಕಾಯ್ದೆ ರೂಪಿಸಬೇಕೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಗುರುವಾರ ನಡೆಯುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆಯಾಗುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ರಾಜ್ಯ ಸರಕಾರಗಳು ನೀಟ್ ಅನ್ವಯಿಕೆಯನ್ನು ಮುಂದೂಡುವಂತೆ ಮನವಿ ಮಾಡಿವೆ.

ಈ ವರ್ಷ ಕೂಡಾ ತಮ್ಮ ರಾಜ್ಯಗಳ ಶೇಕಡ 85ರಷ್ಟು ಸೀಟುಗಳನ್ನು ತಮ್ಮ ಪ್ರವೇಶ ಪರೀಕ್ಷೆಗಳ ಆಧಾರದಲ್ಲೇ ಭರ್ತಿ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿವೆ. ಆದರೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಈ ಬಗ್ಗೆ ಸ್ಪಷ್ಟನೆ ನೀಡಿ, ಎಲ್ಲ ಖಾಸಗಿ ವೈದ್ಯಕೀಯ ಕಾಲೇಜುಗಳು ಹಾಗೂ ಸ್ವಾಯತ್ತ ವಿಶ್ವವಿದ್ಯಾನಿಲಯಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಿಲ್ಲ. ನೀಟ್ ಮಾರ್ಗದ ಮೂಲಕವೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News