ಇನ್ನು ಏಜಂಟ್ 007 ಆಗುವುದಿಲ್ಲ: ಡೇನಿಯಲ್ ಕ್ರೇಗ್

Update: 2016-05-19 12:32 GMT

ಲಾಸ್ ಏಂಜಲಿಸ್, ಮೇ 19: ಇನ್ನೊಮ್ಮೆ ಜೇಮ್ಸ್ ಬಾಂಡ್ ಪಾತ್ರ ಮಾಡುವುದಕ್ಕಿಂತ ನಾನು ನನ್ನ ಕೈಯ ಮಣಿಗಂಟನ್ನೇ ಕೊಯ್ದುಕೊಳ್ಳುತ್ತೇನೆ ಎಂದು ಡೇನಿಯಲ್ ಕ್ರೇಗ್ ಹೇಳಿದ್ದಾರೆ.

ಎರಡು ಚಿತ್ರಗಳಲ್ಲಿ ಜೇಮ್ಸ್ ಬಾಂಡ್ ಆಗಿ ನಟಿಸಲು ಎಂಜಿಎಂ ಸ್ಟುಡಿಯೊ ನೀಡಿದ 68 ಮಿಲಿಯ ಪೌಂಡ್ (ಸುಮಾರು 670 ಕೋಟಿ ರೂಪಾಯಿ) ಕೊಡುಗೆಯನ್ನು ಹಾಲಿವುಡ್ ನಟ ತಿರಸ್ಕರಿಸಿದ್ದಾರೆ ಎಂದು ‘ಡೇಲಿ ಮೇಲ್’ನ ವರದಿಯೊಂದು ತಿಳಿಸಿದೆ.

ಅವರಿಗೆ ನೀಡಲಾದ ಕೊಡುಗೆಯಲ್ಲಿ ಜಾಹೀರಾತುಗಳು, ಲಾಭದಲ್ಲಿ ಪಾಲು ಮತ್ತು ಸಹ ನಿರ್ಮಾಪಕನಾಗಿ ಕೆಲಸ ಮಾಡುವ ಅವಕಾಶಗಳು ಸೇರಿವೆ.

ಜೇಮ್ಸ್ ಬಾಂಡ್ ಪಾತ್ರಗಳನ್ನು ಮಾಡಿದ ನಟರಲ್ಲೇ ಕ್ರೇಗ್ ಅತ್ಯಂತ ಹೆಚ್ಚು ಸಂಭಾವನೆ ಪಡೆದ ನಟರಾಗಿದ್ದಾರೆ. ಜೇಮ್ಸ್ ಬಾಂಡ್ ಆಗಿ ನಟಿಸಿದ ನಾಲ್ಕು ಚಿತ್ರಗಳಿಂದ ಅವರು ಒಟ್ಟು 38 ಮಿಲಿಯ ಪೌಂಡ್ (ಸುಮಾರು 375 ಕೋಟಿ ರೂಪಾಯಿ) ಹಣ ಗಳಿಸಿದ್ದಾರೆ. ಅವರು 2005ರಿಂದ ಬಾಂಡ್ ಆಗಿ ಅಭಿನಯಿಸುತ್ತಿದ್ದಾರೆ. ಅವರು ಅಭಿನಯಿಸಿದ ಚಿತ್ರಗಳು ಬಾಕ್ಸ್ ಆಫಿಸ್‌ನಲ್ಲಿ 200 ಕೋಟಿ ಪೌಂಡ್ (19,723 ಕೋಟಿ ರೂಪಾಯಿ) ಗಳಿಸಿವೆ.

ಕಳೆದ ವರ್ಷ ಬಿಡುಗಡೆಯಾದ ಅವರ ಚಿತ್ರ ‘ಸ್ಪೆಕ್ಟರ್’ ಹಿಟ್ ಆಗಿತ್ತು. ಹಾಗಾಗಿ, ಇನ್ನೂ ಎರಡು ಚಿತ್ರಗಳಿಗೆ ಬಾಂಡ್ ಆಗಿ ಮರಳುವಂತೆ ಕ್ರೇಗ್‌ಗೆ ಎಂಜಿಎಂ ಸ್ಟುಡಿಯೊ 68 ಮಿಲಿಯ ಪೌಂಡ್‌ನ ಕೊಡುಗೆ ನೀಡಿತ್ತು, ಆದರೆ ಅದನ್ನು ಕ್ರೇಗ್ ನಿರಾಕರಿಸಿದರು ಎಂದು ಮೂಲಗಳು ಹೇಳಿವೆ.

ಅವರ ನಿರಾಕರಣೆಯ ಹಿನ್ನೆಲೆಯಲ್ಲಿ ಟಾಮ್ ಹಿಡಲ್‌ಸ್ಟನ್ ಮುಂದಿನ ಜೇಮ್ಸ್ ಬಾಂಡ್ ಆಗುವುದು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News