×
Ad

ಭಾರತದ ಮಹಿಳಾ ತಂಡಕ್ಕೆ ಕಂಚಿನ ಪದಕ

Update: 2016-05-20 23:32 IST

ಉಬೇರ್ ಕಪ್ ಬ್ಯಾಡ್ಮಿಂಟನ್ ಟೂರ್ನಿ

ಕುನ್ಶಾನ್(ಚೀನಾ), ಮೇ 20: ಉಬೇರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಚೀನಾ ತಂಡದ ವಿರುದ್ಧ ಶರಣಾಗಿರುವ ಭಾರತದ ಮಹಿಳಾ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಶನಿವಾರ ಇಲ್ಲಿ ನಡೆದ ಅಂತಿಮ ನಾಲ್ಕರ ಸುತ್ತಿನ ಪಂದ್ಯದಲ್ಲಿ ಭಾರತ 0-3 ಅಂತರದಿಂದ ಸೋಲುಂಡಿತು. ಭಾರತದ ಅಗ್ರ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಸಿಂಗಲ್ಸ್ ಪಂದ್ಯಗಳಲ್ಲಿ ಕೂದಲೆಳೆ ಅಂತರದಿಂದ ಸೋತಿದ್ದಾರೆ.

 ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಎನ್.ಸಿಕ್ಕಿ ರೆಡ್ಡಿ ಸೋಲುವುದರೊಂದಿಗೆ ಭಾರತ 0-3 ಅಂತರದಿಂದ ಆತಿಥೇಯ ಚೀನಾಕ್ಕೆ ಶರಣಾಗಿದೆ.

 ಹೊಸದಿಲ್ಲಿಯಲ್ಲಿ ನಡೆದ ಕಳೆದ ಆವೃತ್ತಿಯ ಉಬೇರ್ ಕಪ್‌ನಲ್ಲಿ ಮೊತ್ತ ಮೊದಲ ಬಾರಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದ ಭಾರತೀಯರು ಐತಿಹಾಸಿಕ ಸಾಧನೆ ಮಾಡಿದ್ದರು. ಇಲ್ಲಿನ ಕುನ್ಶಾನ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ಕಂಚಿನ ಪದಕ ಜಯಿಸಿದ ಭಾರತ ಕಳೆದ ವರ್ಷದ ಸಾಧನೆಯನ್ನು ಪುನರಾವರ್ತಿಸಿದೆ.

ಸೈನಾ ನೆಹ್ವಾಲ್ ನೇತೃತ್ವದ ಭಾರತ ತಂಡ ಗುರುವಾರ ಥಾಯ್ಲೆಂಡ್ ವಿರುದ್ಧ 3-1 ಅಂತರದಿಂದ ಜಯ ಸಾಧಿಸುವುದರೊಂದಿಗೆ ಕಂಚಿನ ಪದಕವನ್ನು ದೃಢಪಡಿಸಿತ್ತು. ಭಾರತ ತಂಡ ಫೈನಲ್ ಸುತ್ತಿಗೇರಲು 13 ಬಾರಿಯ ಚಾಂಪಿಯನ್ ಚೀನಾದ ವಿರುದ್ಧ ವೀರೋಚಿತ ಪ್ರದರ್ಶನ ನೀಡುವ ಅಗತ್ಯವಿತ್ತು. ಆದರೆ, ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ.

ಸೈನಾ ಹಾಗೂ ಸಿಂಧು ಮೇಲೆ ಬಹಳಷ್ಟು ವಿಶ್ವಾಸವಿತ್ತು. ಆದರೆ, ಈ ಇಬ್ಬರು ಶತ ಪ್ರಯತ್ನ ನಡೆಸಿದರೂ ಭಾರತಕ್ಕೆ ಉತ್ತಮ ಆರಂಭ ನೀಡಲು ವಿಫಲರಾದರು.

ದಿನದ ಮೊದಲ ಪಂದ್ಯದಲ್ಲಿ ಸೈನಾ ಚೀನಾದ ಲೀ ವಿರುದ್ಧ 15-21, 21-12, 17-21 ಗೇಮ್‌ಗಳ ಅಂತರದಿಂದ ಸೋತರು. ಸೈನಾ ಅವರು ಲೀ ವಿರುದ್ಧ ಸತತ 8ನೆ ಸೋಲು ಕಂಡರು.

 ಮತ್ತೊಂದು ಸಿಂಗಲ್ಸ್‌ನಲ್ಲಿ ಭಾರತದ ಸಿಂಧು ಚೀನಾದ ಶಿಕ್ಸಿಯಾನ್ ವಾಂಗ್ ವಿರುದ್ಧ 50 ನಿಮಿಷಗಳ ಹೋರಾಟದಲ್ಲಿ 13-21, 21-23 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಸಿಂಧು ವಿಶ್ವದ ನಂ.6ನೆ ಆಟಗಾರ್ತಿಯ ವಿರುದ್ಧ ಸತತ 4ನೆ ಪಂದ್ಯ ಸೋತಿದ್ದಾರೆ.

25 ನಿಮಿಷಗಳ ಕಾಲ ನಡೆದ ಡಬಲ್ಸ್ ಪಂದ್ಯದಲ್ಲಿ ಜ್ವಾಲಾ-ಸಿಕ್ಕಿ ಜೋಡಿ ಟಿಯಾನ್ ಕ್ವಿಂಗ್ ಹಾಗೂ ಝಾವೊ ಯೂನ್ಲೀ ವಿರುದ್ಧ 6-12, 6-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News