ಫ್ರೆಂಚ್ ಓಪನ್: ಸೆಮಿಫೈನಲ್‌ನಲ್ಲಿ ಜೊಕೊವಿಕ್-ನಡಾಲ್
ಪ್ಯಾರಿಸ್, ಮೇ 20: ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸುವ ಗುರಿ ಹಾಕಿಕೊಂಡಿರುವ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್‌ನಲ್ಲಿ 9 ಬಾರಿಯ ಚಾಂಪಿಯನ್ ರಫೆಲ್ ನಡಾಲ್‌ರನ್ನು ಎದುರಿಸುವ ಸಾಧ್ಯತೆಯಿದೆ.
ಫ್ರೆಂಚ್ ಓಪನ್‌ನ ಡ್ರಾ ಪ್ರಕ್ರಿಯೆ ಶನಿವಾರ ನಡೆದಿದ್ದು ಅಗ್ರ ರ್ಯಾಂಕಿನ ಜೊಕೊವಿಕ್ ಮೊದಲ ಸುತ್ತಿನಲ್ಲಿ ಲೂ ಯೆನ್-ಸನ್‌ರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ಫೆಡರರ್ ಫ್ರೆಂಚ್ ಓಪನ್ ಟೂರ್ನಿಯಿಂದ ಹಿಂದೆ ಸರಿದ ಕಾರಣ ನಾಲ್ಕನೆ ಶ್ರೇಯಾಂಕ ಪಡೆದಿರುವ ನಡಾಲ್ ಮೊದಲ ಸುತ್ತಿನಲ್ಲಿ ಸ್ಯಾಮ್ ಗ್ರಾತ್‌ರನ್ನು ಎದುರಿಸಲಿದ್ದಾರೆ. ಮೊದಲ ಸೆಮಿಫೈನಲ್‌ನಲ್ಲಿ ನಡಾಲ್-ಜೊಕೊವಿಕ್ ಮುಖಾಮುಖಿಯಾಗುವ ಸಾಧ್ಯತೆಯಿದೆ. ಕಳೆದ ವರ್ಷ ನಡಾಲ್-ಜೊಕೊವಿಕ್ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಿದ್ದರು. ಆ ಪಂದ್ಯದಲ್ಲಿ ಜೊಕೊವಿಕ್ ಜಯ ಸಾಧಿಸಿದ್ದರು.
ಹಾಲಿ ಚಾಂಪಿಯನ್ ಸ್ಟಾನ್ ವಾವ್ರಿಂಕ ಹಾಗೂ ಆ್ಯಂಡಿ ಮರ್ರೆ ಮತ್ತೊಂದು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.
ಜೊಕೊವಿಕ್ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಮೂರು ಬಾರಿ ಫೈನಲ್‌ನಲ್ಲಿ ಎಡವಿದ್ದರು. ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆದರೆ, ಸತತ ನಾಲ್ಕು ಪ್ರಮುಖ ಚಾಂಪಿಯನ್‌ಶಿಪ್ ಜಯಿಸಿದ ಸಾಧನೆ ಮಾಡಲಿದ್ದಾರೆ. ಜೊಕೊವಿಕ್ ಫ್ರೆಂಚ್ ಓಪನ್‌ನಲ್ಲಿ 37-3 ದಾಖಲೆ ಹೊಂದಿದ್ದಾರೆ.
ಫ್ರೆಂಚ್ ಓಪನ್: ಫೆಡರರ್, ಮೊನ್‌ಫಿಲ್ಸ್ ಅಲಭ್ಯ
ಪ್ಯಾರಿಸ್, ಮೇ 20: ಫಿಟ್‌ನೆಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಮಾಜಿ ಚಾಂಪಿಯನ್ ರೋಜರ್ ಫೆಡರರ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
34ರ ಹರೆಯದ ವಿಶ್ವದ ನಂ.3ನೆ ಆಟಗಾರ ಫೆಡರರ್ ಬೆನ್ನುನೋವಿನಿಂದಾಗಿ ಇತ್ತೀಚೆಗೆ ನಡೆದ ಮ್ಯಾಡ್ರಿಡ್ ಓಪನ್‌ನಿಂದ ಹೊರಗುಳಿದಿದ್ದರು. ಆದರೆ, ರೋಮ್ ಓಪನ್‌ನಲ್ಲಿ ಭಾಗವಹಿಸಿದ್ದ ಫೆಡರರ್ ಮೊದಲ ಸುತ್ತಿನಲ್ಲೇ ಸೋತು ಹೊರ ನಡೆದಿದ್ದರು.
‘‘ನಾನೀಗ ಶೇ.100ರಷ್ಟು ಫಿಟ್ ಆಗಿಲ್ಲ. ನಾನು ಸಂಪೂರ್ಣ ಫಿಟ್ ಆಗದೇ ಯಾವುದೇ ಟೂರ್ನಿಯಲ್ಲಿ ಆಡುವ ಗೋಜಿಗೆ ಹೋಗಲಾರೆ’’ ಎಂದು 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಫೆಡರರ್ ನುಡಿದರು.
ಮೊನ್‌ಫಿಲ್ಸ್ ಔಟ್: ಫ್ರಾನ್ಸ್ ಆಟಗಾರ ಗಾಯೆಲ್ ಮೊನ್‌ಫಿಲ್ಸ್ ವೈರಲ್ ಸೋಂಕಿನ ಕಾರಣದಿಂದ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
14ನೆ ರ್ಯಾಂಕಿನ ಮೊನ್‌ಫಿಲ್ಸ್ ಈ ವರ್ಷ ಮಾಂಟೆ ಕಾರ್ಲೊ ಮಾಸ್ಟರ್ಸ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದರು. ಆದರೆ, ಮ್ಯಾಡ್ರಿಡ್ ಹಾಗೂ ರೋಮ್ ಓಪನ್‌ನಲ್ಲಿ ಬೇಗನೆ ಸೋತು ಹೊರ ನಡೆದಿದ್ದರು.
ಮೊನ್‌ಫಿಲ್ಸ್ 2008ರ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಕಳೆದ ವರ್ಷ 4ನೆ ಸುತ್ತಿಗೆ ತಲುಪಿದ್ದರು.