100 ಮೀ.ಓಟ: ದ್ಯುತಿ ಚಂದ್‌ಗೆ ಚಿನ್ನ

Update: 2016-05-20 18:05 GMT

ತೈವಾನ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್

 ತೈವಾನ್, ಮೇ 20: ತೈವಾನ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಭಾರತದ ಹಿರಿಯ ಓಟಗಾರ್ತಿ ದ್ಯುತಿ ಚಂದ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಆದರೆ, ಕೆಲವೇ ಸೆಕೆಂಡ್‌ಗಳ ಅಂತರದಿಂದ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶದಿಂದ ವಂಚಿತರಾದರು.

ಬೀಜಿಂಗ್‌ನಲ್ಲಿ 100 ಮೀ. ಹೀಟ್ಸ್‌ನಲ್ಲಿ ಭಾಗವಹಿಸಿ ತೈವಾನ್‌ಗೆ ಪ್ರಯಾಣಿಸಿದ ದ್ಯುತಿ 5 ಗಂಟೆಯ ಬಳಿಕ 100 ಮೀ. ಓಟದ ಫೈನಲ್‌ನಲ್ಲಿ ಭಾಗವಹಿಸಿದರು. 11.50 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕವನ್ನು ಜಯಿಸಿದರು. ಆದರೆ, ಒಲಿಂಪಿಕ್ಸ್ ಅರ್ಹತಾ ಸಮಯವನ್ನು ತಲುಪಲು ವಿಫಲರಾದರು. ಒಲಿಂಪಿಕ್ಸ್‌ಗೆ ಅರ್ಹತೆಗೊಳ್ಳಲು 11.32 ಸೆಕೆಂಡ್‌ನಲ್ಲಿ ಗುರಿ ತಲುಪಬೇಕಾಗಿತ್ತು.

  ಲಾಂಗ್‌ಜಂಪ್ ತಾರೆ ಅಂಕಿತಾ ಶರ್ಮ ತನ್ನ ಅಂತಿಮ ಯತ್ನದಲ್ಲಿ 7.67ಮೀ. ದೂರ ಜಿಗಿದು ಚಿನ್ನದ ಪದಕವನ್ನು ಜಯಿಸಿದ್ದಾರೆ.

 ಬುಧವಾರ ಬೀಜಿಂಗ್‌ನಲ್ಲಿ ನಡೆದ ಐಎಎಎಫ್ ವಿಶ್ವ ಚಾಲೆಂಜ್ ಟೂರ್ನಿಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿ, ನಾಲ್ಕನೆ ಸ್ಥಾನ ಪಡೆದಿದ್ದ ಮಹಿಳೆಯರ 4-100 ಮೀ. ರಿಲೇ ತಂಡದಲ್ಲಿ ಭಾಗವಹಿಸಿದ್ದ ದ್ಯುತಿ ಬೀಜಿಂಗ್‌ನಿಂದ ನೇರವಾಗಿ ತೈವಾನ್‌ಗೆ ಆಗಮಿಸಿದ್ದರು. ಟೂರ್ನಿ ಆರಂಭವಾಗುವ ಎರಡು ಗಂಟೆಯ ಮೊದಲು ತೈವಾನ್‌ಗೆ ತಲುಪಿದ್ದರು.

 ದ್ಯುತಿ ಇನ್ನು ಎರಡು ಟೂರ್ನಿಯಲ್ಲಿ ಭಾಗವಹಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಯತ್ನಿಸಲಿದ್ದಾರೆ.. ಮುಂದಿನ ತಿಂಗಳು ಕಝಕ್‌ಸ್ತಾನ ಹಾಗೂ ಕಿರ್ಜಿಸ್ತಾನದಲ್ಲಿ ತಲಾ ಒಂದು ಟೂರ್ನಿಯಲ್ಲಿ ದ್ಯುತಿ ಭಾಗವಹಿಸಲಿದ್ದಾರೆ. ಈ ನಡುವೆ ಮುಂದಿನ ತಿಂಗಳು ಹೈದರಾಬಾದ್‌ನಲ್ಲಿ ನ್ಯಾಶನಲ್ ಇಂಟರ್-ಸ್ಟೇಟ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸುವ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News