ಭೀಕರ ದುರಂತಕ್ಕೂ ಕರಗದ ವಿಕೃತರ ಮನಸ್ಸು
ಕೈರೋ , ಮೇ 19 : ಕೆಲವರು ಇನ್ನು ಯಾವ ಮಟ್ಟಕ್ಕಿಳಿಯುತ್ತಾರೆ ಎಂದು ಊಹಿಸುವುದೇ ಕಷ್ಟ. ಮೊನ್ನೆ ಪ್ಯಾರಿಸ್ ನಿಂದ ಹೊರಟು ಕೈರೊಗೆ ಪ್ರಯಾಣಿಸುತ್ತಿದ್ದ ಈಜಿಪ್ಟ್ ಏರ್ ವಿಮಾನ ಪತನವಾದ ವಿಷಯ ಬಹಿರಂಗವಾದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಲವು ಮಾಹಿತಿಗಳನ್ನು ಹಾಕಿದರು, ಇನ್ನಷ್ಟು ಮಾಹಿತಿಗಳನ್ನು ಕೇಳಿದರು . ಆದರೆ ವಿಪರ್ಯಾಸವೆಂದರೆ ಈ ಪೈಕಿ ಎಲ್ಲವೂ ನಿಜವಾಗಿರಲಿಲ್ಲ. ಕೆಲವು ' ನೀಚ ' ಮನಸ್ಥಿತಿಯವರು ಇಂತಹ ಭೀಕರ ದುರಂತದಲ್ಲೂ ತಮ್ಮ ವಿಕೃತ ಆನಂದ ಪಡೆಯಲು ಹಿಂಜರಿಯಲಿಲ್ಲ.
"perro " ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರ " ನನ್ನ ಸೋದರ ಅದರಲ್ಲಿ ಪ್ರಯಾಣಿಸುತ್ತಿದ್ದ .. ದಯವಿಟ್ಟು ಸಹಾಯ ಮಾಡಿ " ಎಂದು ಒಬ್ಬ ವ್ಯಕ್ತಿಯ ಚಿತ್ರದೊಂದಿಗೆ ಸಂದೇಶ ಹಾಕಿದ. ಅದನ್ನು ಬಹಳಷ್ಟು ಜನ ರಿಟ್ವೀಟ್ ಮಾಡಿದರು.
ಆದರೆ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಚಿತ್ರ ಈಗಾಗಲೇ ಬೇರೆ ಬೇರೆ ಕಡೆ ಬಳಕೆಯಾಗಿದ್ದು , ಟ್ವಿಟ್ಟರ್ ನಲ್ಲೂ ಬೇರೆ ಖಾತೆಗಳಿಂದ ಬಳಕೆಯಾಗಿದೆ ಎಂದು ಸಾಬೀತಾಯಿತು. ಆ ವ್ಯಕ್ತಿ ಹಸಿ ಸುಳ್ಳು ಹೇಳಿದ್ದ ಹಾಗು ಜನರ ಭಾವನೆಯೊಂದಿಗೆ ಅತ್ಯಂತ ನೀಚ ಅಭಿರುಚಿಯ ಆಟವಾಡಿದ್ದ.
ಇನ್ನೊಬ್ಬ " ನನ್ನ ತಾಯಿ ಆ ವಿಮಾನದಲ್ಲಿದ್ದರು .. ನನಗೆ ಭಯವಾಗುತ್ತಿದೆ .. ನಾನು ಏನು ಮಾಡಬೇಕು ಎಂದು ಹೇಳಿ " ಎಂದು ಟ್ವೀಟ್ ಮಾಡಿದ. ಕೊನೆಗೆ ಇದೂ ಸುಳ್ಳಾಗಿತ್ತು. ಇಂತಹ ಹೆಚ್ಚಿನ ಸುಳ್ಳು ಟ್ವೀಟ್ ಗಳ ಮೂಲ ಮೆಕ್ಸಿಕೋ ದಲ್ಲಿತ್ತು.