×
Ad

ಕಣ್ಣೂರು: ಸಿಪಿಎಂ-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ, ನಿಷೇಧಾಜ್ಞೆ ಜಾರಿ

Update: 2016-05-20 23:57 IST

ಕಣ್ಣೂರು,ಮೇ 20: ಗುರುವಾರ ರಾತ್ರಿ ಪಾಣೂರ್,ಧರ್ಮಾದಂ,ತಲಶ್ಶೇರಿ ಮತ್ತು ಪಿಣರಾಯಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಎಡರಂಗದ ವಿಜಯೋತ್ಸವದ ಸಂದರ್ಭದಲ್ಲಿ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಗಳಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದು, ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಹೇರಲಾಗಿದೆ.

ಗಾಯಾಳುಗಳ ಪೈಕಿ 24 ಜನರು ಬಿಜೆಪಿಗೆ ಸೇರಿದ್ದರೆ,ಆರು ಜನರು ಸಿಪಿಎಂ ಕಾರ್ಯಕರ್ತರಾಗಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘರ್ಷಣೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳತ್ತ ಕಚ್ಚಾಬಾಂಬ್‌ಗಳನ್ನು ಎಸೆಯಲಾಗಿದ್ದು,ವಾಹನಗಳನ್ನೂ ಜಖಂಗೊಳಿಸಲಾಗಿದೆ.
ಕಣ್ಣೂರು ಸಿಪಿಎಂನ ಭದ್ರಕೋಟೆಯಾಗಿದೆ.
ಗುರುವಾರ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ನ ಚುನಾವಣಾ ವಿಜಯೋತ್ಸವಗಳಲ್ಲಿ ಎರಡು ಕಚ್ಚಾಬಾಂಬ್‌ಗಳನ್ನು ಸ್ಫೋಟಿಸಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದರು.
ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಹಾಗೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಪಿಣರಾಯಿ ವಿಜಯನ್ ಅವರು ವಿಜಯ ಸಾಧಿಸಿರುವ ಧರ್ಮಾದಂ ಕ್ಷೇತ್ರದಲ್ಲಿ ಸಿಪಿಎಂ ಕಾರ್ಯಕರ್ತನ ಹತ್ಯೆಯನ್ನು ಪ್ರತಿಭಟಿಸಿ ಶುಕ್ರವಾರ ಅರ್ಧ ದಿನ ಬಂದ್ ಆಚರಿಸಲಾಯಿತು.
ಕಾಸರಗೋಡು ಜಿಲ್ಲೆಯ ಉತ್ತರ ಭಾಗದ ಕೆಲವೆಡೆಗಳಲ್ಲಿಯೂ ಸಿಪಿಎಂ-ಬಿಜೆಪಿ ಮತ್ತು ಸಿಪಿಎಂ-ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿರುವ ಹಿನ್ನೆಲೆಯಲ್ಲಿ ಕಾಸರಗೋಡು, ಕಾಂಞಂಗಾಡ್ ಮತ್ತು ಮಂಜೇಶ್ವರಗಳಲ್ಲಿಯೂ ನಿಷೇಧಾಜ್ಞೆಯನ್ನು ಹೇರಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News