ಕೋಲ್ಕತಾಕ್ಕೆ ಇಂದು ಹೈದರಾಬಾದ್ ವಿರುದ್ಧ ಮಹತ್ವದ ಪಂದ್ಯ
ಕೋಲ್ಕತಾ, ಮೇ 21: ಐಪಿಎಲ್ ಟೂರ್ನಿಯಲ್ಲಿ ಪ್ಲೇ-ಆಫ್ ಸ್ಥಾನಕ್ಕಾಗಿ 6 ತಂಡಗಳ ನಡುವೆ ತೀವ್ರ ಪೈಪೋಟಿ ಆರಂಭವಾಗಿದ್ದು, ಎರಡು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ಗೆ ಅಂತಿಮ ನಾಲ್ಕರ ಸುತ್ತನ್ನು ಪ್ರವೇಶಿಸಬೇಕಾದರೆ ರವಿವಾರ ಇಲ್ಲಿ ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಈ ಬಾರಿಯ ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಕೊನೆ ಹಂತ ತಲುಪಿದ್ದರೂ ಯಾವ ತಂಡಗಳು ಪ್ಲೇ-ಆಫ್ ಸ್ಥಾನವನ್ನು ದೃಢಪಡಿಸಿಲ್ಲ. ಐದು ತಂಡಗಳು ತಲಾ 16 ಅಂಕವನ್ನು ಗಳಿಸಿದರೆ ನೆಟ್ ರನ್ರೇಟ್ನ ಮೂಲಕ ಪ್ಲೇ-ಆಫ್ನಲ್ಲಿ ಆಡಲಿರುವ ನಾಲ್ಕು ತಂಡವನ್ನು ನಿರ್ಧರಿಸಲಾಗುತ್ತದೆ.
ಕಳೆದ ಎರಡು ದಿನಗಳಿಂದ ಕೋಲ್ಕತಾದಲ್ಲಿ ಚಂಡಮಾರುತದಿಂದ ಭಾರೀ ಮಳೆಯಾಗುತ್ತಿದ್ದು, ಈಡನ್ಗಾರ್ಡನ್ಸ್ನ ಮೈದಾನದಲ್ಲಿ ಹೊದಿಕೆ ಹಾಸಲಾಗಿದೆ. ಎರಡು ತಂಡಗಳು ರವಿವಾರದ ಪಂದ್ಯಕ್ಕೆ ಮಳೆ ಅಡ್ಡಿಪಡಿಸದಿರಲಿ ಎಂದು ಪ್ರಾರ್ಥಿಸುತ್ತಿವೆ.
ಒಟ್ಟು 16 ಅಂಕವನ್ನು ಗಳಿಸಿರುವ ಹೈದರಾಬಾದ್ ತಂಡ ಅಂಕಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದೆ. ಉತ್ತಮ ರನ್ರೇಟ್ಯಿರುವ ಕಾರಣ ಅಂತಿಮ ಲೀಗ್ ಪಂದ್ಯದಲ್ಲಿ ಸೋತರೂ ತಂಡಕ್ಕೆ ಯಾವುದೇ ಧಕ್ಕೆಯಾಗದು.
ಗೌತಮ್ ಗಂಭೀರ್ ನಾಯಕತ್ವದ ಕೋಲ್ಕತಾ ತಂಡಕ್ಕೆ ರವಿವಾರದ ಪಂದ್ಯ ನಾಕೌಟ್ ಪಂದ್ಯವೆನಿಸಿದೆ. ಅಸ್ಥಿರ ಪ್ರದರ್ಶನ ನೀಡುತ್ತಿರುವ ಕೋಲ್ಕತಾ ತಂಡಕ್ಕೆ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಗಾಯದ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ.
ಈ ವರ್ಷ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಜಮೈಕಾದ ಆಲ್ರೌಂಡರ್ ರಸೆಲ್ ಕಾಲುನೋವಿನ ಹಿನ್ನೆಲೆಯಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಹೈದರಾಬಾದ್ ವಿರುದ್ದ ಮಾಡು-ಮಡಿ ಪಂದ್ಯದಲ್ಲಿ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ರಸೆಲ್ ಈ ವರ್ಷ 12 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿ ಕೋಲ್ಕತಾ ಪರ ಗರಿಷ್ಠ ವಿಟ್ ಪಡೆದಿದ್ದಾರೆ. ಬ್ಯಾಟಿಂಗ್ನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಕೆಕೆಆರ್ಗೆ ಪ್ಲೇ-ಆಫ್ನಲ್ಲಿ ಸ್ಥಾನ ಪಡೆಯಲು ಅಂತಿಮ 4 ಪಂದ್ಯಗಳಲ್ಲಿ ಎರಡರಲ್ಲಿ ಜಯದ ಅಗತ್ಯವಿತ್ತು. ಆದರೆ, ಸತತ 2 ಪಂದ್ಯಗಳಲ್ಲಿ ಸೋತು ಹಿನ್ನಡೆ ಕಂಡಿದೆ.
2012 ಹಾಗೂ 2014ರ ಐಪಿಎಲ್ ಚಾಂಪಿಯನ್ ಕೆಕೆಆರ್ಗೆ ಈ ಬಾರಿ ಸ್ಪಿನ್ನರ್ಗಳಿಂದ ನಿರೀಕ್ಷಿತ ಕೊಡುಗೆ ಸಂದಾಯ ಆಗಿಲ್ಲ. ಈ ಹಿಂದಿನ ಪಂದ್ಯದಲ್ಲಿ ಕೆಕೆಆರ್ ತಂಡ ಹೈದರಾಬಾದ್ನ್ನು 8 ವಿಕೆಟ್ಗಳ ಅಂತರದಿಂದ ಮಣಿಸಿತ್ತು. ಆ ಪಂದ್ಯದಲ್ಲಿ ಗಂಭೀರ್ ಔಟಾಗದೆ 90 ರನ್ ಗಳಿಸಿದ್ದರು. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರು ವಿಕೆಟ್ಗಳಿಂದ ಸೋತಿರುವ ಗಂಭೀರ್ ಪಡೆ ಆ ಸೋಲಿನಿಂದ ಹೊರಬರುವ ವಿಶ್ವಾಸದಲ್ಲಿದೆ.
ಹೈದರಾಬಾದ್ ತಂಡದ ಎಡಗೈ ವೇಗದ ಬೌಲರ್ ಆಶೀಷ್ ನೆಹ್ರಾ ಗಾಯಗೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ನೆಹ್ರಾ ಅನುಪಸ್ಥಿತಿಯಲ್ಲಿ ಇನ್ನೋರ್ವ ಎಡಗೈ ವೇಗಿ ಬರಿಂದರ್ ಸ್ರಾನ್ ಉತ್ತಮ ಪ್ರದರ್ಶನ ನೀಡಿದ್ದರು.
ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಏಳು ಅರ್ಧಶತಕಗಳ ಸಹಿತ ಒಟ್ಟು 640 ರನ್ ಗಳಿಸಿ ತಂಡದ ಬ್ಯಾಟಿಂಗ್ಗೆ ಬಲ ನೀಡುತ್ತಿದ್ದಾರೆ. ವಾರ್ನರ್ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ(865 ರನ್) ಬಳಿಕ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ಗಳಿಸಿರುವ ಎರಡನೆ ಬ್ಯಾಟ್ಸ್ಮನ್ ಆಗಿದ್ದಾರೆ.
ಪಂದ್ಯದ ಸಮಯ: ಸಂಜೆ 4:00