ಮೇರಿ ಕೋಮ್ ಒಲಿಂಪಿಕ್ಸ್ ಕನಸು ಭಗ್ನ

Update: 2016-05-21 18:19 GMT

ಸರಿತಾ ದೇವಿಗೂ ಕೈತಪ್ಪಿದ ಒಲಿಂಪಿಕ್ಸ್ ಟಿಕೆಟ್

ಅಸ್ತಾನಾ(ಕಝಕಿಸ್ತಾನ), ಮೇ 21: ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಹಿರಿಯ ಬಾಕ್ಸರ್ ಮೇರಿ ಕೋಮ್ ಅವರ ಸತತ ಎರಡನೆ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕನಸು ಭಗ್ನಗೊಂಡಿದೆ. ಒಲಿಂಪಿಕ್ಸ್‌ಗೆ ಅರ್ಹತಾ ಟೂರ್ನಿಯಾಗಿದ್ದ ಎಐಬಿಎ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್ ಸೋಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಕೈ ತಪ್ಪಿದೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಮೇರಿ ಕೋಮ್ ಶನಿವಾರ ಇಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ 51 ಕೆ.ಜಿ. ತೂಕ ವಿಭಾಗದಲ್ಲಿ ಜರ್ಮನಿಯ ಅಝೀಝ್ ನಿಮಾನಿ ವಿರುದ್ಧ 0-2 ಅಂತರದಿಂದ ಸೋತಿದ್ದಾರೆ.

ಈ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪುವ ಬಾಕ್ಸರ್ ಮುಂಬರುವ ರಿಯೋ ಗೇಮ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ. ಮತ್ತೊಂದು 2ನೆ ಸುತ್ತಿನ ಪಂದ್ಯದಲ್ಲಿ ಎಲ್.ಸರಿತಾದೇವಿ(60ಕೆಜಿ) ವಿಕ್ಟೋರಿಯ ಟೊರ್ರೆಸ್ ವಿರುದ್ಧ 3-0 ಅಂತರದಿಂದ ಸೋಲನುಭವಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲರಾದರು.

ಶುಕ್ರವಾರ ಮೊದಲ ಪಂದ್ಯವನ್ನು ಜಯಿಸಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿರುವ ಪೂಜಾ ರಾಣಿ(75ಕೆಜಿ) ಭಾರತದ ಪರ ಏಕೈಕ ಆಶಾಕಿರಣವಾಗಿದ್ದಾರೆ. ಮಣಿಪುರದ ಮೇರಿ ಕೋಮ್ ಮೊದಲ ಹಾಗೂ ಎರಡನೆ ಸುತ್ತಿನ ಅರಂಭದಲ್ಲಿ ಆಕ್ರಮಣಕಾರಿ ಆಟದಿಂದ ಗಮನ ಸೆಳೆದರು. ಆದರೆ, ಮೇರಿಗೆ ತಿರುಗೇಟು ನೀಡಿದ ನಿಮಾನಿ 2-0 ಅಂತರದಿಂದ ಜಯ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News