ಜೆಡಿಯು ಮಾಜಿ ಶಾಸಕಿಯ ಪುತ್ರನಿಂದ ಹತ್ಯೆಗೀಡಾದ ಆದಿತ್ಯಗೆ ಪಿಯುಸಿಯಲ್ಲಿ ಶೇ.70 ಅಂಕ
ಗಯಾ(ಬಿಹಾರ), ಮೇ 22: ಇತ್ತೀಚೆಗೆ ಬಿಹಾರದ ರಾಜಕಾರಣಿಯ ಪುತ್ರ ರಿಕಿ ಯಾದವ್‌ರಿಂದ ಕ್ಷುಲ್ಲಕ ಕಾರಣಕ್ಕೆ ಹತ್ಯೆಗೀಡಾಗಿದ್ದ 19ರ ಹರೆಯದ ಆದಿತ್ಯ ಸಚ್‌ದೇವ್ ಪಿಯುಸಿ ಪರೀಕ್ಷೆಯಲ್ಲಿ ಶೇ.70 ಅಂಕ ಗಳಿಸಿ ಪಾಸಾಗಿದ್ದಾರೆ.
ಜೆಡಿಯು ಮಾಜಿ ಎಂಎಲ್‌ಸಿ ಮನೋರಮಾ ದೇವಿ ಪುತ್ರ ರಿಕಿ ಯಾದವ್, ಸಚ್‌ದೇವ್‌ರನ್ನು ಗುಂಡಿಕ್ಕಿ ಸಾಯಿಸಿದ್ದ. ಮೇ 7 ರಂದು ರಾತ್ರಿ ಬಿಹಾರದ ಗಯಾ ಪಟ್ಟಣದಲ್ಲಿ ಆದಿತ್ಯ ಸಚ್‌ದೇವ್, ರಿಕಿ ಯಾದವ್ ಪ್ರಯಾಣಿಸುತ್ತಿದ್ದ ರೇಂಜ್ ರೋವರ್ ಕಾರನ್ನು ಹಿಂದಿಕ್ಕಿದ್ದಾನೆ ಎಂಬ ಕ್ಷುಲ್ಲಕ ಕಾರಣ ಆದಿತ್ಯನನ್ನು ಅಡ್ಡಗಟ್ಟಿ ವಾಗ್ವಾದ ನಡೆಸಿದ್ದಲ್ಲದೆ, ಗುಂಡಿಕ್ಕಿ ಸಾಯಿಸಿದ್ದ.
‘‘ನನ್ನ ಮಗ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾನೆ. ಆದರೆ, ಜೀವನದ ಪರೀಕ್ಷೆಯಲ್ಲಿ ಫೇಲಾಗಿದ್ದಾನೆ. ಅವನು ಈಗ ಬದುಕಿದ್ದರೆ ನಮಗೆ ತುಂಬಾ ಸಂತೋಷವಾಗುತ್ತಿತ್ತು...ಆದರೆ, ನಾವು ಈಗ ಏನು ಹೇಳಲು ಸಾಧ್ಯ. ನಾವು ಫಲಿತಾಂಶವನ್ನು ನೋಡಲು ಹೋಗಿಲ್ಲ. ಆದಿತ್ಯನ ಸ್ನೇಹಿತರು ಆತ ಶೇ.70ರಷ್ಟು ಅಂಕ ಗಳಿಸಿದ್ದಾನೆಂದು ಮಾಹಿತಿ ನೀಡಿದ್ದಾರೆ’’ ಎಂದು ಆದಿತ್ಯರ ತಂದೆ ಶ್ಯಾಮ್ ಸುಂದರ್ ಸಚ್‌ದೇವ್ ದುಃಖ ತೋಡಿಕೊಂಡಿದ್ದಾರೆ.
ಪಿಯುಸಿಯಲ್ಲಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡಿದ್ದ ಆದಿತ್ಯ, ದಿಲ್ಲಿ ಇಲ್ಲವೇ ಮುಂಬೈನಲ್ಲಿ ಉನ್ನತ ವ್ಯಾಸಂಗ ಮಾಡುವ ಯೋಚನೆಯಲ್ಲಿದ್ದ ಎಂದು ಆದಿತ್ಯ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಆದಿತ್ಯ ಸಾವಿಗೆ ಕಾರಣವಾದ ರಿಕಿ ಯಾದವ್ ಗಯಾದ ಸೆಂಟ್ರಲ್ ಜೈಲಿನಲ್ಲಿದ್ದಾನೆ. ರಿಕಿ ಕಾರಿನೊಂದಿಗೆ ಪರಾರಿಯಾಗಲು ನೆರವು ನೀಡಿದ್ದ ಆತನ ತಂದೆ ಹಾಗೂ ಅಂಗರಕ್ಷಕನನ್ನು ಜೈಲಿಗೆ ಅಟ್ಟಲಾಗಿದೆ. ಅಮಾನತುಗೊಂಡಿರುವ ಜೆಡಿಯು ಶಾಸಕಿ ಮನೋರಮಾ ದೇವಿ ಇತ್ತೀಚೆಗೆ ಪೊಲೀಸರ ಮುಂದೆ ಶರಣಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.