ಮಾಲೆಗಾಂವ್ ಅಮಾಯಕರಿಗೆ ಕೋಟಿ ರೂಪಾಯಿ ಪರಿಹಾರ ನೀಡಲು ಆಗ್ರಹ
ಬೆಂಗಳೂರು: ಮಲೇಗಾಂವ್‌ನಲ್ಲಿ 2006ರಲ್ಲಿ ಸಂಭವಿಸಿದ ಸ್ಫೋಟ ಪ್ರಕೃಣ ಸಂಬಂಧ ಹತ್ತು ವರ್ಷಗಳ ಬಳಿಕ ದೋಷಮುಕ್ತರಾದ ಆಲ್ ಇಂಡಿಯಾ ಮಜ್ಲೀಸ್ ಉಲ್ ಮುಸ್ಲಿಮೀನ್ (ಎಐಎಂಐಎಂ) ಸಂಘಟನೆ ಹಾಗೂ ಎಂಟು ಮಂದಿ ಯುವಕರು ಒಂದು ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದರ ಜತೆಗೆ ಪುನರ್ವಸತಿ ಸೌಲಭ್ಯ ಹಾಗೂ ನಡತೆ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದ್ದಾರೆ.
ಅಂದಿನ ಭಯೋತ್ಪಾದಕ ವಿರೋಧಿ ಪಡೆಯ ಮುಖ್ಯಸ್ಥ ಕೆ.ಪಿ.ರಘುವಂಶಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಇದರಲ್ಲಿ ಷಾಮೀಲಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ. 2016ರ ಏಪ್ರಿಲ್ 25ರಂದು ರಾಷ್ಟ್ರೀಯ ತನಿಖಾ ಸಂಸ್ಥೆ, ತನ್ನ ಹೆಚ್ಚುವರಿ ಆರೋಪಪಟ್ಟಿಯಲ್ಲಿ, "ಆರೋಪಿಗಳಿಗೂ ಸ್ಫೋಟಕ್ಕೂ ಸಂಬಂಧವಿದೆ ಎಂದು ನಿರೂಪಿಸುವ ಯಾವ ಪುರಾವೆಗಳೂ ಇಲ್ಲ" ಎಂದು ಹೇಳಿ ಎಂಟು ಮಂದಿ ಸ್ಥಳೀಯರನ್ನು ಆರೋಪಮುಕ್ತಗೊಳಿಸಲು ಶಿಫಾರಸ್ಸು ಮಾಡಿತ್ತು.
"ಈ ಸ್ಥಳೀಯ ಹುಡುಗರಿಗೆ ಬಹಳಷ್ಟು ಕಿರುಕುಳ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನಡತೆ ಪ್ರಮಾಣಪತ್ರ, ಪುನರ್ವಸತಿ, ಸರ್ಕಾರಿ ಉದ್ಯೋಗ ಹಾಗೂ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕು ಎಂದು ಎಐಎಂಐಎ ಅಧ್ಯಕ್ಷೆ ಅಂಜುಂ ಇನಾಮದಾರ ಆಗ್ರಹಿಸಿದ್ದಾರೆ.