ಮೌಂಟ್ ಎವರೆಸ್ಟ್ ಇಬ್ಬರು ಪರ್ವತಾರೋಹಿಗಳ ಸಾವು

Update: 2016-05-22 17:35 GMT

ಸುಮಾರು ಮೂವತ್ತು ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಶಿಖರದ ಮೇಲೆ ಹಿಮಕಾಯಿಲೆಗೆ ತುತ್ತಾಗಿದ್ದಾರೆ ಎಂದು ಪರ್ವತಾರೋಹಣದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈಗಾಗಲೇ ಎತ್ತರದ ಕಾಯಿಲೆಯಿಂದ ಇಬ್ಬರು ಸಾವನ್ನಪ್ಪಿರುವುದು ಜಗತ್ತಿನ ಅತೀ ಎತ್ತರದ ಪರ್ವತದ ಮೇಲೆ ಪರ್ವತಾರೋಹಿಗಳು ಎದುರಿಸುವ ಅಪಾಯವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಬಹುತೇಕ ಪರ್ವತಾರೋಹಿಗಳು ಶೃಂಗವನ್ನು ಏರುವಾಗ ಅಥವಾ ಇಳಿಯುವಾಗ ಹಿಮಕಾಯಿಲೆಗೆ ತುತ್ತಾಗಿದ್ದಾರೆ ಎಂದು ಪರ್ವತಾರೋಹಣ ಇಲಾಖೆಯ ಅಧಿಕಾರಿ ಗ್ಯಾನೇಂದ್ರ ಶ್ರೇಷ್ಠ ತಿಳಿಸಿದ್ದಾರೆ. ಅನುಕೂಲ ಹವಾಮಾನವು ಸುಮಾರು 400ರಷ್ಟು ಪರ್ವತಾರೋಹಿಗಳು ಮೇ 11ರಿಂದ ಶೃಂಗವನ್ನು ನೇಪಾಳದ ಕಡೆಯಿಂದ ಏರಲು ಅವಕಾಶ ನೀಡಿತ್ತು, ಆದರೆ ಎತ್ತರ, ಹವಾಮಾನ ಮತ್ತು ಕಠಿಣ ನೆಲ ಯಾವಾಗ ಬೇಕಾದರೂ ಸಮಸ್ಯೆ ತಂದೊಡ್ಡಬಹುದು. ಕೆಲವು ಶೆರ್ಪಾ ಮಾರ್ಗದರ್ಶಕರು ಓರ್ವ ಕಾಯಿಲೆಪೀಡಿತ ಪರ್ವತಾರೋಹಿಯನ್ನು 8000 (26,240 ಅಡಿ) ಮೀಟರ್ ಎತ್ತರದಲ್ಲಿರುವ ಅತ್ಯುನ್ನತ ಶಿಬಿರದಿಂದ 6,400 ಮೀಟರ್ (21,000 ಅಡಿ) ಎತ್ತರದಲ್ಲಿರುವ ಎರಡನೇ ಶಿಬಿರಕ್ಕೆ ಸಾಗಿಸಿದರು. ಅಲ್ಲಿಂದ ಆಕೆಯನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ತಾಣಕ್ಕೆ ಸಾಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕಠ್ಮಂಡುವಿನಲ್ಲಿರುವ ಸೆವೆನ್ ಸಮ್ಮಿಟ್ ಟ್ರೆಕ್ಸ್ ಸಂಸ್ಥೆಯ ಪೆಂಬಾ ಶೆರ್ಪಾ ತಿಳಿಸಿದ್ದಾರೆ. ದಕ್ಷಿಣ ಕರ್ನಲ್ ಶಿಬಿರಲ್ಲಿದ್ದ ಭಾರತದ ಸೀಮಾ ಗೋಸ್ವಾಮಿ ಎಂಬಾಕೆಯ ಕೈ ಮತ್ತು ಪಾದಗಳು ಹಿಮಕಾಯಿಲೆಗೆ ತುತ್ತಾಗಿ ಒಡೆದಿರುವುದರಿಂದ ಆಕೆ ಚಲಿಸಲಾಗದೆ ಅಸಹಾಯಕರಾಗಿದ್ದಾರೆ.

ನಾವು ಬಹಳ ದೊಡ್ಡ ಮತ್ತು ಅಪಾಯಕಾರಿ ಪ್ರಯತ್ನವನ್ನು ಮಾಡಿದೆವು. ಆದರೆ ಆಕೆಯನ್ನು ಉಳಿಸುವಲ್ಲಿ ಸಫಲವಾದೆವು ಎಂದು ಹೇಳಿದ ಶೆರ್ಪಾ ಇರಾನ್ ಮೂಲದ ಎಸ್ ಹದಿ ಎಂಬವರನ್ನೂ ಇದೇ ರೀತಿ ರಕ್ಷಿಸಲಾಗಿದ್ದು ಕಠ್ಮಂಡುವಿಗೆ ಕರೆತಂದು ನಂತರ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ನಾರ್ವೆ ಪ್ರಜೆ 45ರ ಹರೆಯದ ಸಿವ್ ಹರ್ಸ್‌ತದ್ ಎಂಬಾಕೆ ಹಿಮಅಂಧತ್ವಕ್ಕೆ ಒಳಗಾಗಿದ್ದಾರೆ ಮತ್ತು ಆಕೆಯನ್ನು ಶನಿವಾರದಂದು ಶಿಖರದಿಂದ ಕೆಳಗೆ ಸಾಗಿಸಲಾಗಿದೆ ಎಂದು ನಾರ್ವೆಯ ಸುದ್ದಿ ಸಂಸ್ಥೆ ಎನ್‌ಟಿಬಿ ವರದಿ ಮಾಡಿದೆ.
ಇನ್ನು ಮೃತಪಟ್ಟ ಇಬ್ಬರು ಕೂಡಾ ಒಂದೇ ತಂಡದಲ್ಲಿದ್ದವರು. ಅವರ ದೇಹವನ್ನು ಯಾವಾಗ ಶಿಖರದಿಂದ ಕೆಳಗೆ ತರಲಾಗುತ್ತದೆ ಎಂದು ಇನ್ನೂ ನಿರ್ಧರಿಸಲಾಗಿಲ್ಲ ಮತ್ತು ಅದು ಸಂಪೂರ್ಣವಾಗಿ ತಂಡ ಮತ್ತು ಕುಟುಂಬ ಸದಸ್ಯರನ್ನು ಅವಲಂಬಿತವಾಗಿದೆ ಎಂದು ಸೆವೆನ್ ಸಮ್ಮಿಟ್ ಸಂಸ್ಥೆಯ ಪಸಂಗ್ ಫುರ್ಬಾ ತಿಳಿಸುತ್ತಾರೆ. ಎವರೆಸ್ಟ್‌ನಿಂದ ದೇಹಗಳನ್ನು ಕೆಳಗೆ ತರಲು ಎಂಟು ಶೆರ್ಪಾಗಳ ಅಗತ್ಯವಿರುತ್ತದೆ ಯಾಕೆಂದರೆ ಅವುಗಳು ಹಿಮಗಟ್ಟುವುದರಿಂದ ಮತ್ತಷ್ಟು ಭಾರವಾಗುತ್ತದೆ.
8,850 ಮೀಟರ್ (29,035 ಅಡಿ)ಯಲ್ಲಿ ಸಂಭಾಷಣೆಗೆ ಕಷ್ಟವಾಗಿರುವುದರಿಂದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News