ಅಮೆರಿಕನ್ ಸಿಖ್ಖ್ ರಾಜಕಾರಣಿಯನ್ನು ‘ಭಯೋತ್ಪಾದಕ’ನೆಂದು ನಿಂದಿಸಿದ ಟ್ರಂಪ್ ಬೆಂಬಲಿಗ
ನ್ಯೂಯಾರ್ಕ್,ಮೇ 22: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಕಟ್ಟಾ ಬೆಂಬಲಿಗನೊಬ್ಬ, ಭಾರತೀಯ ಮೂಲದ ಅಮೆರಿಕನ್ ಸಿಖ್ಖ್ ರಾಜಕಾರಣಿ ರವೀಂದರ್ ಭಲ್ಲಾ ಅವರನ್ನು ‘‘ಭಯೋತ್ಪಾದಕ’’ನೆಂದು ಟ್ವಿಟರ್‌ನಲ್ಲಿ ನಿಂದಿಸಿದ್ದುದು ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಲ್ಲಾ ಅವರು, ‘‘ಅಮೆರಿಕನ್ ಎಂಬುದರ ನಿಜವಾದ ಅರ್ಥ ನಿಮಗೆ ತಿಳಿದಿಲ್ಲ’’ ಎಂದು ಟ್ರಂಪ್ ಬೆಂಬಲಿಗನಿಗೆ ಚಾಟಿ ಬೀಸಿದ್ದಾರೆ.
ನ್ಯೂಜೆರ್ಸಿ ಪ್ರಾಂತ್ಯದ ಹೊಬೊಕನ್ ನಗರ ಮಂಡಳಿ ಸದಸ್ಯರಾದ ರವೀಂದರ್ ಭಲ್ಲಾ ಅವರು,ಹೊಬೊಕನ್ ನಗರ ಮಂಡಳಿಯು, ನದಿ ಪಕ್ಕದಲ್ಲಿ ಬಹುಪಯೋಗಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿರುವುದಾಗಿ ಟ್ವೀಟ್ ಮಾಡಿದ್ದರು. ಭಲ್ಲಾ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ, ಟ್ರಂಪ್ ಅವರ ಕಟ್ಟಾ ಬೆಂಬಲಿಗರಾದ ರೊಬರ್ಟ್ ಡ್ಯುಬೆನಿಝಿಕ್ ಎಂಬವರು ಸಿಖ್ಖ್ ಜನಾಂಗೀಯರಾದ ಭಲ್ಲಾ ನಗರ ಮಂಡಳಿಯ ಸದಸ್ಯರಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದರು. ‘‘ ಇಂತಹ ವ್ಯಕ್ತಿಗಳನ್ನು ನಗರ ಮಂಡಳಿಯ ಸದಸ್ಯನಾಗಿರಲು ಹೊಬೊಕನ್ ನಗರ ಹೇಗೆ ಹೇಗೆ ಅವಕಾಶ ನೀಡಿತು. ಆತನಿಗೆ ಅಮೆರಿಕದಲ್ಲಿರಲೂ ಅವಕಾಶ ನೀಡಕೂಡದು. ಭಯೋತ್ಪಾದಕ’’ ಎಂದು ಡ್ಯೂಬೆನೆಝಿಕ್ ಗುರುವಾರ ಟ್ವೀಟ್ ಮಾಡಿದ್ದರು.ಇದಕ್ಕೆ ಟ್ವೀಟರ್‌ನಲ್ಲಿ ತಕ್ಷಣವೇ ಪ್ರತಿಕ್ರಿಯಿಸಿದ ಭಲ್ಲಾ ಅವರು, ‘‘ ಸರ್ ನಾನು ಅಮೆರಿಕದಲ್ಲೇ ಹುಟ್ಟಿ, ಬೆಳೆದಿದ್ದೇನೆ. ನಿಮಗೆ ಅಮೆರಿಕನ್ ಎಂಬುದರ ನಿಜವಾದ ಅರ್ಥ ತಿಳಿದಿಲ್ಲ.... ಅಜ್ಞಾನಿ’’ ಎಂದು ಹೇಳಿದ್ದರು.
ಡ್ಯುಬೆನೆಝಿಕ್ ತನ್ನ ಟ್ವಿಟರ್ ಪುಟದಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಯಲ್ಲಿ ಟ್ರಂಪ್ ಅವರ ಆಯ್ಕೆಯನ್ನು ಬೆಂಬಲಿಸುವ ಹಲವು ಸಂದೇಶಗಳನ್ನು ಪ್ರಕಟಿಸಿದ್ದಾರೆ.