ಅಸ್ಸಾಂನಲ್ಲಿ ಮುಸ್ಲಿಮರ ಮತ ವಿಭಜನೆ ಬಿಜೆಪಿಗೆ ವರವಾಗಿ ಪರಿಣಮಿಸಿತು
ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತದರ ಮಿತ್ರಕೂಟ ಇಷ್ಟೊಂದು ದೊಡ್ಡ ಅಂತರದಲ್ಲಿ ಜಯ ಸಾಧಿಸಲು ಬಹಳಷ್ಟು ಅಂಶಗಳು ಆಂತರಿಕವಾಗಿ ಕೆಲಸ ಮಾಡಿವೆ, ರಾಜ್ಯದ ಮುಸ್ಲಿಂ ಮತಗಳು ವಿಭಜನೆಯಾಗಿರುವುದು ಈ ಅಂಶಗಳಲ್ಲಿ ಒಂದು. ಅಸ್ಸಾಂನಲ್ಲಿ ಮುಸ್ಲಿಮರ ಮತದಾನ ವಿನ್ಯಾಸದ ವಿಶ್ಲೇಷಣೆ ಗೊಂದಲಮಯ ಚಿತ್ರಣವನ್ನು ತೆರದಿಡುತ್ತದೆ-ಇವರಲ್ಲಿ ಬಹುತೇಕರು ಕಾಂಗ್ರೆಸ್‌ಗೆ ನಿಷ್ಠರಾಗಿರಲು ನಿರ್ಧರಿಸಿದರೆ, ಗಮನಾರ್ಹ ಸಂಖ್ಯೆಯ ಮುಸ್ಲಿಂ ಮತದಾರರು ತಮ್ಮ ಹಳೆ ಪಕ್ಷವನ್ನು ತ್ಯಜಿಸಿ ಸುಗಂಧ ದ್ರವ್ಯಗಳ ದೊರೆ ಮೌಲಾನಾ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಅಖಿಲ ಭಾರತ ಸಂಯುಕ್ತ ಪ್ರಜಾಸತಾತ್ಮಕ ರಂಗ (ಎಐಯುಡಿಎಫ್) ಮತ್ತು ಬಿಜೆಪಿ-ಅಸೊಮ್ ಗಣ ಪರಿಷದ್ (ಎಜಿಪಿ)-ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಮೈತ್ರಿಕೂಟದತ್ತ ಒಲವು ತೋರಿದರು.
ಎಲ್ಲಾ ಚುನಾವಣಾ ಸಮೀಕ್ಷೆಗಳು ತಿಳಿಸಿದಂತೆ ಎಐಯುಡಿಎಫ್ ಈ ಚುನಾವಣೆಯಲ್ಲಿ ಅಷ್ಟೊಂದು ಕಳಪೆ ನಿರ್ವಹಣೆ ತೋರದೆ ಸಮೀಕ್ಷೆಗಳನ್ನು ಹುಸಿಯಾಗಿಸಿತು. ಅದು ಹದಿಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಶೇ.13 ಮತಗಳನ್ನು ಗಳಿಸಿ, ಬಂಗಾಳಿ ಭಾಷಿಗರು ಹೆಚ್ಚಾಗಿರುವ ಬರಾಕ್ ಕಣಿವೆಯಲ್ಲಿನ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಮತಗಳನ್ನು ಕಾಂಗ್ರೆಸ್‌ನಿಂದ ಕಸಿಯುವಲ್ಲಿ ಸಫಲವಾಯಿತು. ಹೈಲಕಂಡಿ ಮತ್ತು ದಕ್ಷಿಣ ಕರೀಂಗಂಜ್ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದ್ದ ಕಾರಣ ಕಾಂಗ್ರೆಸ್ ವಿರೋಧಿ ಅಲೆಯಿದ್ದ ಪರಿಣಾಮ ಹೀಗಾಯಿತು. ಆದರೆ ಬಂಗಾಳಿ ಮುಸ್ಲಿಮರು ಮತ್ತು ವಲಸಿಗರು ಬಾಹುಳ್ಯ ಹೊಂದಿರುವ ಪಶ್ಚಿಮ ಮತ್ತು ಮಧ್ಯ ಅಸ್ಸಾಂನ ಅನೇಕ ಕ್ಷೇತ್ರಗಳಲ್ಲಿ ಬೇರೆಯದ್ದೇ ಚಿತ್ರಣ ಹೊರಹೊಮ್ಮಿತ್ತು.
ಇಲ್ಲಿ ಅಜ್ಮಲ್ ಸೋಲುಂಡ ದಕ್ಷಿಣ ಸಲ್ಮಾರವೂ ಸೇರಿದಂತೆ ಅನೇಕ ಕಡೆ ಹೆಚ್ಚಿನ ಮತಗಳು ಕಾಂಗ್ರೆಸ್‌ನತ್ತ ವರ್ಗಾವಣೆಗೊಂಡಿದ್ದವು. ಪಶ್ಚಿಮ ಮತ್ತು ಮಧ್ಯ ಅಸ್ಸಾಂನಲ್ಲಿ ಬೆಂಗಾಳಿ ಮುಸ್ಲಿಮರು ಬಾಂಗ್ಲಾದೇಶದ ವಲಸಿಗರ ಜೊತೆ ತಮ್ಮನ್ನು ಸೇರಿಸಿಕೊಳ್ಳುವುದನ್ನು ಎಂದೂ ಒಪ್ಪುವುದಿಲ್ಲ. ಹಾಗಾಗಿ ಬಿಜೆಪಿಯ ಹಿಂದೂ ಧ್ರುವೀಕರಣ ನೀತಿಯ ವಿರುದ್ಧ ಎಲ್ಲಾ ಮುಸ್ಲಿಮರೂ ಒಂದಾಗಬೇಕು ಎಂದು ಅಜ್ಮಲ್ ಕರೆ ನೀಡಿದಾಗ ಬೆಂಗಾಳಿ ಮುಸ್ಲಿಮರು ಒಂದಷ್ಟು ಗಲಿಬಿಲಿಗೊಂಡರು. ಅವರು ಕೇವಲ ಎಐಯುಡಿಎಫ್‌ನ ಕರೆಯನ್ನು ತಿರಸ್ಕರಿಸಿದ್ದು ಮಾತ್ರವಲ್ಲ ಸಾಮೂಹಿಕವಾಗಿ ಕಾಂಗ್ರೆಸ್‌ಗೆ ಮತ ಹಾಕಿದರು. ಅದರಲ್ಲಿ ಒಂದಷ್ಟು ಜನರು ಬಿಜೆಪಿಯ ಪರವಾಗಿ ಮತ ಚಲಾಯಿಸಿರಬಹುದು, ಅದು ಬಹುಶಃ ಸ್ಥಳೀಯ ಸಮಸ್ಯೆಗಳು ಮತ್ತು ಅಭ್ಯರ್ಥಿಗಳ ಕಾರಣದಿಂದಾಗಿ. ಉದಾಹರಣೆಗೆ, ಬಿಜೆಪಿಯ ಅಶೋಕ್ ಸಿಂಘಿ ಮುಸ್ಲಿಂ ಬಾಹುಳ್ಯದ ಪೂರ್ವ ಬಿಲಾಸಿಪಾರದಲ್ಲಿ ಜಯಗಳಿಸಲು ಅವರು ದಶಕಗಳಿಂದ ನಡೆಸಿಕೊಂಡು ಬಂದಿರುವ ರಖಂ ವ್ಯವಹಾರದ ಮುಖಾಂತರ ಮುಸ್ಲಿಮರ ಜೊತೆ ಉಂಟಾಗಿರುವ ಸಂಪರ್ಕ ಮತ್ತು ಕಾಂಗ್ರೆಸ್ ಮತ್ತು ಎಐಯುಡಿಎಫ್ ಮಧ್ಯೆ ಮತಗಳು ಹಂಚಿ ಹೋಗಿರುವ ಕಾರಣವಾಗಿದೆ.
ಹೀಗೆ ಪಕ್ಷಗಳ ಮಧ್ಯೆ ಮತಗಳು ಹಂಚಿ ಹೋಗಿರುವುದರಿಂದ ಬಿಜೆಪಿ ಏಕಾಂಗಿ ಮುಸ್ಲಿಂ ಅಭ್ಯರ್ಥಿ ಆಮಿನುಲ್ ಹಕ್ ಲಸ್ಕರ್ ಬರಾಕ್ ಕಣಿವೆಯ ಸೊನೈಯಿಂದ ಜಯ ಗಳಿಸಿದರು. ಬರ್ಕೇತ್ರಿ, ಸಿಪಜರ್ ಮತ್ತು ಸರ್ಬೋಗ್‌ಗಳಲ್ಲೂ ಒಂದಷ್ಟು ಬೆಂಗಾಳಿ ಮುಸ್ಲಿಮರು ಕಾಂಗ್ರೆಸನ್ನು ಸೋಲಿಸುವ ಸಲುವಾಗಿ ಬಿಜೆಪಿ ಪರ ಮತ ಚಲಾಯಿಸಿದರು. ಅಸ್ಸಾಂನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಮರು ವಿವಿಧ ರೀತಿಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಎಐಯುಡಿಎಫ್‌ನ ಮಾಜಿ ಉಪಾಧ್ಯಕ್ಷ ಹಫೀಝ್ ರಶೀದ್ ಚೌಧರಿ ಹೇಳುತ್ತಾರೆ. ಅಜ್ಮಲ್‌ರಿಂದ ಮೋಸಕ್ಕೊಳಗದೆವು ಎಂದು ಭಾವಿಸಿದ ಅವರು ಕಾಂಗ್ರೆಸ್‌ಗೆ ಮತ ಹಾಕಿದರು,
ಆದರೆ ಪಕ್ಷವು ಮುಸ್ಲಿಂ ಮತಗಳ ದೊಡ್ಡ ಭಾಗವನ್ನು ಗಳಿಸುವಲ್ಲಿ ವಿಫಲವಾಯಿತು. ಬರಾಕ್ ಕಣಿವೆಯಲ್ಲಿ ಕಾಂಗ್ರೆಸ್ ವಿರುದ್ಧ ಅಲೆಯಿತ್ತು ಮತ್ತು ಅದು ಎಐಯುಡಿಎಫ್ ಗೆಲವಿಗೆ ನೆರವಾಯಿತು. ಜೊತೆಗೆ ಅಭಿವೃದ್ಧಿಯ ವಿಷಯ ಕೂಡಾ ಹಲವು ಕ್ಷೇತ್ರಗಳಲ್ಲಿ ಪ್ರಮುಖವಾಗಿತ್ತು ಮತ್ತು ಇಲ್ಲಿ ಯಾವುದೇ ಧಾರ್ಮಿಕ ಆಯಾಮ ಇರಲಿಲ್ಲ ಎಂದವರು ಹೇಳುತ್ತಾರೆ. ಚೌಧರಿಯವರ ಈ ವಿಶ್ಲೇಷಣೆ, ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತ್ತು ಎಜಿಪಿಯನ್ನು ಆಯ್ಕೆ ಮಾಡುವ ಮತ್ತು ತಮ್ಮ ಮತ್ತು ಎಐಯುಡಿಎಫ್ ಮಧ್ಯೆ ಸುರಕ್ಷಿತ ಅಂತರ ಕಾಯುವ ಅಸ್ಸಾಮಿ ಮುಸ್ಲಿಮರು ಅಥವಾ ಗೊರಿಯಾಗಳು ಈ ಬಾರಿ ಬಿಜೆಪಿ-ಎಜಿಪಿ-ಬಿಪಿಎಫ್ ಮೈತ್ರಿಯನ್ನು ಒಂದು ಕಾರ್ಯಸಾಧುವಾದ ಬದಲಾವಣೆಯೆಂದು ಯಾಕೆ ಭಾವಿಸಿದರು ಎಂಬುದಕ್ಕೆ ಉತ್ತರ ನೀಡುತ್ತದೆ.
ಗುವಾಹಟಿ ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ಮೊನಿರುಲ್ ಹುಸೈನ್, ಬಿಜೆಪಿ ಮತ್ತು ಎಜಿಪಿ ಮಧ್ಯೆಯ ಮೈತ್ರಿ ಕೂಡಾ ಅಸ್ಸಾಮಿ ಮುಸ್ಲಿಮರ ಸಣ್ಣ ಗುಂಪು ಬಿಜೆಪಿಗೆ ಮತ ಹಾಕುವಂತೆ ಮಾಡಿರಬಹುದು ಎಂದು ಹೇಳುತ್ತಾರೆ. ಅಸ್ಸಾಂನ ಮುಸ್ಲಿಮರು ವಿವಿಧ ಸಮುದಾಯಗಳಿಂದ ಮತ್ತು ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅಸ್ಸಾಂನ ಕೆಳ ಮತ್ತು ಮಧ್ಯಭಾಗದಲ್ಲಿರುವ ಪೂರ್ವ ಬಂಗಾಳ (ಈಗ ಬಾಂಗ್ಲಾದೇಶ) ಮೂಲದ ಮುಸ್ಲಿಮರು ತಮ್ಮನ್ನು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಬಹುದು ಎಂಬ ಭಯವನ್ನು ಹೊಂದಿದ್ದಾರೆ. ಆದರೆ ಈ ಭಯ ಅಸ್ಸಾಂನ ಮುಸ್ಲಿಮರಿಗಿಲ್ಲ. ಮತ್ತೊಂದು ಕಡೆ ಆಡಳಿತಾರೂಢ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅಸಮರ್ಥ ಮತ್ತು ಭ್ರಷ್ಟವಾಗಿದ್ದು ಅದಕ್ಕೆ ಪರ್ಯಾಯದ ಹುಡುಕಾಟ ನಡೆದಿತ್ತು ಎಂದವರು ವಿವರಿಸುತ್ತಾರೆ. ಒಟ್ಟಾರೆಯಾಗಿ ಆರು ಮುಸ್ಲಿಂ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿತ್ತು, ಅವರೆಲ್ಲರೂ ಬೆಂಗಾಳಿ ಮುಸ್ಲಿಮರಾಗಿದ್ದರು. ಆದರೆ ಬೃಹ್ಮಪುತ್ರ ಕಣಿವೆಯಲ್ಲಿ ಅಸ್ಸಾಮಿ ಮುಸ್ಲಿಮರು ಬಿಜೆಪಿಗೆ ಮತ ಹಾಕಿರುವ ಕನಿಷ್ಠ 11 ಕ್ಷೇತ್ರಗಳನ್ನು ಗುರುತಿಸಬಹುದು. ಗುವಾಹಟಿ ಪೂರ್ವದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ರಾಜ್ಯಾಧ್ಯಕ್ಷ ಸಿದ್ಧಾರ್ಥ ಭಟ್ಟಾಚಾರ್ಯ 96,637 ಮತಗಳ ಬೃಹತ್ ಅಂತರದಿಂದ ಜಯ ಗಳಿಸಿದ್ದರು, ಇದು ಮುಸ್ಲಿಂ ಮತದಾರರ ಬೆಂಬಲದ ವಿನಃ ಸಾಧ್ಯವಾಗುತ್ತಿರಲಿಲ್ಲ.
ಇತರ ಕ್ಷೇತ್ರಗಳು ಗುವಾಹಟಿಗೆ ತಾಗಿಕೊಂಡಿರುವ ಅಥವಾ ಸಮೀಪದಲ್ಲಿರುವಂಥವುಗಳು. ಆದರೆ ಬರ್ಪೇಟಾ, ಮೊರಿಗಾಂವ್ ಮತ್ತು ನಗಾಂವ್ ಮುಂತಾದ ಕಡೆಗಳಲ್ಲಿ ಪ್ರಾದೇಶಿಕ ಅಲ್ಪಸಂಖ್ಯಾತ ಮತದಾರರ ಮಧ್ಯೆ ಕೇಸರಿ ಪಡೆ ಒಲವನ್ನು ಗಳಿಸಿಕೊಂಡಿತ್ತು. ಪರಿಣಾಮವಾಗಿ ಮುಸ್ಲಿಂ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಮತ್ತು ಎಐಯುಡಿಎಫ್ ತಮ್ಮ ಸ್ಥಾನಗಳನ್ನ್ನು ಕಳೆದುಕೊಳ್ಳುವಂತೆ ಮಾಡಿತು. ಮತದಾನ ಮತದಾರರಿಗೆ ಪ್ರಜೆಯ ಸ್ಥಾನಮಾನವನ್ನು ನೀಡುವ ಕಾರಣ ಬೆಂಗಾಳಿ ಮುಸ್ಲಿಮರು ಮತ್ತು ವಲಸಿಗರ ಮತದಾನವೂ ಶೇಕಡಾವಾರು ಮತದಾನ ಯಾವಾಗಲೂ ಹೆಚ್ಚಾಗಿಯೇ ಇರುತ್ತದೆ. ಕೆಲವು ಚುನಾವಣಾ ವಿಶ್ಲೇಷಕರ ಪ್ರಕಾರ ಈ ಬಾರಿ ಮುಸ್ಲಿಮೇತರ ಮತದಾರರ ಮತದಾನದವೂ ಶೇಕಡಾವಾರು ಹೆಚ್ಚಾಗಿದ್ದು ಇದು ಈ ಹಿಂದೆ ಎಂದೂ ಕಂಡುಬಂದಿರಲಿಲ್ಲ. ಹಾಗಾಗಿ ಮುಸ್ಲಿಮೇತರ ಮತಗಳು ಬಿಜೆಪಿ ಪರ ಕ್ರೋಡೀಕರಣವಾಗಿದ್ದು ಮತ್ತು ಮುಸ್ಲಿಂ ಮತಗಳು ವಿವಿಧ ಪಕ್ಷಗಳ ಮಧ್ಯೆ ಹಂಚಿ ಹೋಗಿರವುದು ಬಿಜೆಪಿ ಈ ರೀತಿಯ ವಿಜಯವನ್ನು ಸಾಧಿಸಲು ಸಹಾಯವಾಯಿತು. ಅಲಿ ಕುಲಿ (ಮುಸ್ಲಿಂ ಚಹಾ ಪಂಗಡ) ಅಂಶವನ್ನು ಬಳಸಿ ಅಸ್ಸಾಂ ಚುನಾವಣೆಯನ್ನು ಗೆಲ್ಲುವ ಕಾಂಗ್ರೆಸ್‌ನ ದಶಮಾನಗಳಷ್ಟು ಹಳೆಯ ತಂತ್ರ ಈ ಬಾರಿ ಹೀನಾಯವಾಗಿ ಸೋಲುಂಡಿತು.