ಇಸ್ರೋದಿಂದ ಐತಿಹಾಸಿಕ ಸಾಧನೆ : ಸ್ವದೇಶಿ ಸ್ಟೇಸ್‌ಶಟ್ಲ್ ಪರೀಕ್ಷೆ ಯಶಸ್ವಿ

Update: 2016-05-23 13:55 GMT

ಬೆಂಗಳೂರು, ಮೇ 23: ಬಾಹ್ಯಾಕಾಶವನ್ನು ತಲುಪುವ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಲ್ಲ ಮರುಬಳಸಬಹುದಾದ ರಾಕೆಟ್‌ನ ಅಭಿವೃದ್ಧಿಯಲ್ಲಿ ಭಾರತವು ಹೆಜ್ಜೆಯೊಂದನ್ನು ಮುಂದಿರಿಸಿದೆ. ಅದಿಂದು, ‘ಸ್ವದೇಶಿ’ ಸ್ಪೇಸ್ ಶಟ್ಲ್ ಎನ್ನಲಾಗಿರುವ ಸ್ವದೇಶಿ ನಿರ್ಮಿತ ಮರ ಬಳಸಬಹುದಾದ ಉಡಾವಣಾ ವಾಹನವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಹಾರಿಸಿದೆ.

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಅವಳಿ ರೆಕ್ಕೆಯ ಬಾಹ್ಯಾಕಾಶ ವಿಮಾನ ಆಎಲ್‌ವಿ ತಂತ್ರಜ್ಞಾನ ಪ್ರದರ್ಶಕವನ್ನು ವಿಶೇಷ ರಾಕೆಟ್ ಬೂಸ್ಟರ್ ಒಂದರ ಮೂಲಕ 65 ಕಿ.ಮೀ. ಗೂ ಹೆಚ್ಚು ಎತ್ತರದಲ್ಲಿ ವಾತಾವರಣಕ್ಕೆ ಏರಿಸಲಾಯಿತು. ಬಳಿಕ ಮರು ಪ್ರವೇಶಕ್ಕಾಗಿ ಬಿಡುಗಡೆ ಮಾಡಿದ ಬಳಿಕ, ಅದು ಬಂಗಾಳಕೊಲ್ಲಿಯಲ್ಲಿ ಕೆಳಗಿಳಿಯಿತು.

65 ಕಿ.ಮೀ. ಎತ್ತರದಿಂದ ಆರ್‌ಎಲ್‌ವಿ-ಟಿಡಿ ಅವರೋಹಣ ಆರಂಭಿಸಿ, ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಭೂಮಿಯ ವಾತಾವರಣ ಪ್ರವೇಶಿಸಿತು. ವಾಹನದ ನಾವಿಕ ವ್ಯವಸ್ಥೆ, ಮಾರ್ಗದರ್ಶನ ಹಾಗೂ ನಿಯಂತ್ರಣ ವ್ಯವಸ್ಥೆ ಕರಾರುವಾಕ್ಕಾಗಿ ಅದನ್ನು ಸುರಕ್ಷಿತವಾಗಿ ಇಳಿಸಿತೆಂದು ಇಸ್ರೊ ತಿಳಿಸಿದೆ.

ತನ್ನ ಉಷ್ಣ ರಕ್ಷಣಾ ವ್ಯವಸ್ಥೆಯ (ಟಿಪಿಎಸ್) ಸಹಾಯದಿಂದ ಮರು ಪ್ರದೇಶದ ಉನ್ನತ ಉಷ್ಣತೆಯನ್ನು ಯಶಸ್ವಿಯಾಗಿ ತಾಳಿಕೊಂಡ ಆರ್‌ಎಲ್‌ವಿ-ಟಿಡಿ ಶ್ರೀಹರಿ ಕೋಟಾದಿಂದ ಸುಮಾರು 450 ಕಿ.ಮೀ. ದೂರದ, ಬಂಗಾಳಕೊಲ್ಲಿಯ ನಿಗದಿತ ಇಳಿದಾಣದಲ್ಲಿ ಯಶಸ್ವಿಯಾಗಿ ಇಳಿಯಿತು. ಅದು ತನ್ನ ಅಭಿಯಾನದ ಅಗತ್ಯಗಳನ್ನೆಲ್ಲ ಪೂರೈಸಿದೆಯೆಂದು ಅದು ಹೇಳಿದೆ.

ಎಸ್‌ಯುವಿಯ ಗಾತ್ರ ಹಾಗೂ 1.75 ಟನ್ ತೂಕದ ಈ ಬಾಹ್ಯಾಕಾಶ ವಿಮಾನವನ್ನು ನೀರಿನಲ್ಲಿ ತೇಲುವಂತೆ ವಿನ್ಯಾಸಿಸಿರಲಿಲ್ಲ. ಆದುದರಿಂದ ಅದು ನೀರಿನ ಪರಿಣಾಮದಿಂದ ಛಿದ್ರಗೊಂಡುದರಿರಂದ ಪುನಃ ಲಭಿಸಿಲ್ಲ.

ಹಾರಾಟದ ವೇಳೆ, ಶ್ರೀಹರಿಕೋಟಾ ಹಾಗೂ ಹಡಗೊಂದರಲ್ಲಿದ್ದ ಕೇಂದ್ರಗಳಿಂದ ವಾಹನದ ಹಾದಿಯನ್ನು ಯಶಸ್ವಿಯಾಗಿ ಗಮನಿಸಲಾಗಿದೆ. ಉಡಾವಣೆಯಿಂದ ಮರಳಿ ಇಳಿಯುವಲ್ಲಿಯವರೆಗೆ ಒಟ್ಟು ಹಾರಾಟದ ಅವಧಿ ಸುಮಾರು 770 ಸೆಕೆಂಡ್‌ಗಳಾಗಿತ್ತು. ಈ ಯೋಜನೆಗೆ ಸರಕಾರವು ರೂ.95 ಕೋಟಿ ಹೂಡಿಕೆ ಮಾಡಿತ್ತು.

ಭೂಮಿಯ ಕಕ್ಷೆಯಲ್ಲಿ ಉಪಗ್ರಹಗಳನ್ನು ಸ್ಥಾಪಿಸಿ, ಮರಳಿ ಭೂಮಿಗೆ ಬರುವ ಮೂಲಕ, ಉಡಾವಣೆಯ ವೆಚ್ಚವನ್ನು ಭರ್ಜರಿ 10 ಪಟ್ಟಿನಷ್ಟು ತಗ್ಗಿಸುವುದು ಆರ್‌ಎಲ್‌ವಿಯ ಅಂತಿಮ ಗುರಿಯಾಗಿದೆ.

ಇಂದಿನ ಹಾರಾಟದಲ್ಲಿ ಸ್ವಾಯತ್ತ ನಾವಿಕ ಸಂಸ್ಥೆ, ಮಾರ್ಗದರ್ಶನ ಹಾಗೂ ನಿಯಂತ್ರಣ, ಮರು ಬಳಸಬಹುದಾದ ಉಷ್ಣ ರಕ್ಷಣಾ ವ್ಯವಸ್ಥೆ ಹಾಗೂ ಮರು ಪ್ರವೇಶ ಅಭಿಯಾನ ಪ್ರಬಂಧನಗಳು ಪರೀಕ್ಷಯಲ್ಲಿ ಯಶಸ್ವಿಯಾಗಿವೆಯೆಂದು ಇಸ್ರೊ ಹೇಳಿಕಯೊಂದರಲ್ಲಿ ತಿಳಿಸಿದೆ.

ಇದು ಪರೀಕ್ಷಾ ಮಾದರಿಯಾಗಿದ್ದು, ಅಂತಿಮ ಮಾದರಿಯ ಇದರ 6 ಪಟ್ಟು ದೊಡ್ಡದಿರುತ್ತದೆ. ಅದಕ್ಕೆ ಸುಮಾರು 10-15 ವರ್ಷಗಳು ತಗಲಬಹುದು. ಇಸ್ರೊ ಇದೇ ಮೊದಲ ಬಾರಿ ರೆಕ್ಕೆಗಳುಳ್ಳ ಬಾಹ್ಯಾಕಾಶ ವಿಮಾನವನ್ನು ಹಾರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News