ದಲಿತ ವರನನ್ನು ಕುದುರೆಯಿಂದ ಕೆಳಗಿಳಿಸಿದ ಸವರ್ಣೀಯರು

Update: 2016-05-23 17:54 GMT

ಕುರುಕ್ಷೇತ್ರ,ಮೇ 23: ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಭೂಸ್ಥಲ ಗ್ರಾಮದಲ್ಲಿ ಸವರ್ಣೀಯರ ತಾರತಮ್ಯದ ಧೋರಣೆಯಿಂದಾಗಿ ತನ್ನ ಮದುವೆಯ ಮೊದಲಿನ ವಿಧಿಗಳನ್ನೂ ಪೂರೈಸಲು ಸಾಧ್ಯವಾಗದಿದ್ದ ದಲಿತ ಯುವಕನೋರ್ವ ಸೋಮವಾರ ಪೊಲೀಸ್ ರಕ್ಷಣೆಯಲ್ಲಿ ತನ್ನ ವಧುವಿನೊಂದಿಗೆ ಹಸೆಮಣೆಯನ್ನೇರಿದ್ದಾನೆ.
ಶನಿವಾರ ರಾತ್ರಿ ದಲಿತ ಸಮುದಾಯಕ್ಕೆ ಸೇರಿದ ಸಂದೀಪ ಕುಮಾರ ಕುದುರೆಯ ಮೇಲೆ ಮೆರವಣಿಗೆ ಹೊರಟಾಗ ಆತನನ್ನು ತಡೆದ ಗ್ರಾಮದ ಮೇಲ್ಜಾತಿಗಳ ಜನರು ಬಲವಂತದಿಂದ ಕೆಳಗಿಳಿಸಿ ಕಾರು ಅಥವಾ ಟ್ರಾಕ್ಟರ್‌ನಲ್ಲಿ ತೆರಳುವಂತೆ ಆದೇಶಿಸಿದ್ದರು. ಇಷ್ಟೇ ಅಲ್ಲ,ಮದುವೆಗೆ ಮುನ್ನ ಪೂಜಾವಿಧಿಗಳನ್ನು ನಡೆಸಲು ಸ್ಥಳೀಯ ದೇವಸ್ಥಾನಗಳ ಪ್ರವೇಶಕ್ಕೂ ವರನಿಗೆ ಮತ್ತು ಆತನ ಕುಟುಂಬ ಸದಸ್ಯರಿಗೆ ಅವಕಾಶ ನೀಡಿರಲಿಲ್ಲ. ಇದು ಗ್ರಾಮದಲ್ಲಿಯ ಎರಡು ಸಮುದಾಯಗಳ ನಡುವೆ ಘರ್ಷಣೆಗೂ ಕಾರಣವಾಗಿದ್ದು, ಶಾಂತಿಯನ್ನು ಕಾಪಾಡಲು ಸ್ಥಳಕ್ಕೆ ಪೊಲೀಸರನ್ನು ಕರೆಸುವಂತಾಗಿತ್ತು.
ಪೊಲೀಸರ ನೆರವಿನೊಂದಿಗೆ ಸಂದೀಪ ಮತ್ತು ಕುಟುಂಬದವರು ಗ್ರಾಮದಲ್ಲಿಯ ವಾಲ್ಮೀಕಿ ದೇವಸ್ಥಾನಕ್ಕೆ ತೆರಳಿದಾಗ ಗ್ರಾಮಸ್ಥರು ಅವರತ್ತ ಕಲ್ಲುಗಳನ್ನು ತೂರಿದ್ದು, ಪೊಲೀಸರೂ ಗಾಯಗೊಂಡಿದ್ದರು. ಹೆಚ್ಚಿನ ಪೊಲೀಸ್ ಪಡೆಯನ್ನು ಕರೆಸಿದ ಬಳಿಕವೇ ಮೆರವಣಿಗೆ ಅಲ್ಲಿಂದ ಮುಂದೆ ಸಾಗಲು ಸಾಧ್ಯವಾಗಿತ್ತು. ಪೊಲೀಸರ ಉಪಸ್ಥಿತಿಯಲ್ಲಿ ಸಂದೀಪ ಮತ್ತು ವೀಣಾರ ಮದುವೆ ಸೋಮವಾರ ಬೆಳಿಗ್ಗೆ ನಡೆಯಿತು.ದೀಗ ಗ್ರಾಮವು ಸಹಜ ಸ್ಥಿತಿಗೆ ಮರಳಿದೆಯಾದರೂ ಪೊಲೀಸರು ಸಂದೀಪ್ ಮನೆಗೆ ಭದ್ರತೆಯನ್ನೊದಗಿಸಿದ್ದಾರೆ.ಆಡಳಿತವು ಸಂದೀಪ ಮನೆಯವರ ಬೆಂಬಲಕ್ಕೆ ನಿಂತಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ನಾಯಿಬ್ ತಹಶೀಲ್ದಾರ ಚೇತನಾ ಚೌಧರಿ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ 20 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅವರ ಬಂಧನಕ್ಕಾಗಿ ದಾಳಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಕುರುಕ್ಷೇತ್ರ ಡಿಎಸ್‌ಪಿ ಆರ್ಯನ್ ಚೌಧರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News