ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜು: 3 ದೋಣಿ ಖರೀದಿ

Update: 2016-05-23 18:19 GMT

ಉಡುಪಿ, ಮೇ 23: ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ನೆರೆಯಲ್ಲಿ ಬ್ರಹ್ಮಾವರವನ್ನು ಹಾಗೂ ಕಡಲ್ಕೊರೆತದಲ್ಲಿ ಕಾಪುವನ್ನು ಅತ್ಯಂತ ಸೂಕ್ಷ್ಮಪ್ರದೇಶ ಎಂದು ಗುರುತಿಸಲಾಗಿದೆ. ಈಗಾಗಲೇ 15 ದೋಣಿ ಮಾಲಕರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಉಪ್ಪೂರು, ಪಡುಬಿದ್ರೆ ಹಾಗೂ ಕೀಳಿಂಜೆಗೆ ಮೂರು ದೋಣಿಗಳನ್ನು ಖರೀದಿಸಲಾಗಿದೆ ಎಂದು ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ಉಡುಪಿ ತಾಪಂ ಸಭಾಂಗಣದಲ್ಲಿ ಸೋಮವಾರ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಸದಸ್ಯರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು. ಪ್ರಾಕೃತಿಕ ವಿಕೋಪದಿಂದ ಈ ಬಾರಿ ಉಡುಪಿ ತಾಲೂಕಿನಲ್ಲಿ 65 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಮೊದಲ ಹಂತದಲ್ಲಿ 3.20 ಲಕ್ಷ ರೂ. ತುರ್ತು ಪರಿಹಾರವನ್ನು ನೀಡಲಾಗಿದೆ. ಸಂಪೂರ್ಣ ಹಾನಿಯಾಗಿರುವ ಆರು ಮನೆಗಳ ಪೈಕಿ ಮೂರು ಮನೆಗಳಿಗೆ ತಲಾ 95 ಸಾವಿರ ರೂ. ಪರಿಹಾರ ಒದಗಿಸಲಾಗಿದೆ. ಉಳಿದ ಮನೆಗಳಿಗೆ ಎರಡು ದಿನಗಳಲ್ಲಿ ಪರಿಹಾರ ವಿತರಣೆ ಮಾಡಲಾಗುವುದು ಎಂದರು.

ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಅಕಾರಿಗಳ ಎರಡು ಸಭೆಗಳನ್ನು ಕರೆಯಲಾಗಿದೆ. ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಮನೆಗಳ ಬಳಿ ಇರುವ ಮರಗಳನ್ನು ಕಡಿಯುವಂತೆ ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು.

ಆಯಾ ಗ್ರಾಪಂಗಳಲ್ಲಿ ಸ್ಮಶಾನ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರಕಾರಿ ಭೂಮಿಯ ಯಾವುದೇ ಕೊರತೆಯಿಲ್ಲ. ಆದರೆ ಸ್ಥಳೀಯರ ಆಕ್ಷೇಪದಿಂದ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ತೊಂದರೆಯಾಗುತ್ತಿದೆ. ಆದರೆ ಈ ಎರಡು ಉದ್ದೇಶಗಳಿಗೆ ಮೀಸಲಿರಿಸಿದ ಭೂಮಿಗೆ ಯಾವುದೇ ಆಕ್ಷೇಪಗಳು ಬಂದರೂ ಇನ್ನು ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ತಿಳಿಸಿದರು.
400 ರೂ.ಗಿಂತ ಹೆಚ್ಚು ವಿದ್ಯುತ್ ಬಿಲ್ ಬರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿ ರದ್ದಾಗುತ್ತಿದ್ದು, ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ವಿದ್ಯುತ್ ಬಿಲ್‌ನ ಮಿತಿಯನ್ನು 600 ರೂ.ಗೆ ಹೆಚ್ಚಿಸಬೇಕು. ಅಂತರ್‌ಜಿಲ್ಲಾ ಮರಳು ಸಾಗಾಟಕ್ಕೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಸದಸ್ಯರು ಸಭೆಯಲ್ಲಿ ಆಗ್ರಹಿಸಿದರು.

ಕಾಡೂರು, ಹೆಗ್ಗುಂಜೆ, ಶಿರೂರು ಪ್ರದೇಶ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರಾಹಿ ನೀರನ್ನು ಬೇಸಿಗೆಯಲ್ಲಿ ಸೀತಾನದಿಗೆ ಬಿಡುವ ಕಾರ್ಯ ಮಾಡಬೇಕು. ಇದರಿಂದ ಬಹುಗ್ರಾಮ ಯೋಜನೆಗೂ ತುಂಬಾ ಅನುಕೂಲವಾಗಲಿದೆ. ಈ ಬಗ್ಗೆ ಜಿಪಂಗೆ ಪತ್ರ ಬರೆದು ಒತ್ತಾಯ ಮಾಡಬೇಕೆಂದು ಸದಸ್ಯ ಭುಜಂಗ ಶೆಟ್ಟಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಕುರಿತು ಜಿಪಂಗೆ ಮನವಿ ಮಾಡಲಾಗುವುದು ಎಂದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಸಿರುವ ಕಾಮಗಾರಿಗಳಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ನಾಗೇಶ್ ಪೂಜಾರಿ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಅಕಾರಿಗಳು ತಿಳಿಸಿದರು. ತಾಪಂನ ಮೂರು ಸ್ಥಾಯಿ ಸಮಿತಿಯಲ್ಲಿ ವಿರೋಧ ಪಕ್ಷಗಳ ತಲಾ ಒಬ್ಬರು ಸದಸ್ಯರನ್ನು ಸೇರಿಸಿದ್ದಕ್ಕೆ ಡಾ.ಸುನೀತಾ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ 12 ಗ್ರಾಪಂಗಳ ಅಧ್ಯಕ್ಷರನ್ನು ತಾಪಂ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕಾರ್ಯ ನಿರ್ವಹಣಾಕಾರಿ ಶೇಷಪ್ಪ ಉಪಸ್ಥಿತರಿದ್ದರು.

ಜಾತಿ-ಆದಾಯ ಪ್ರಮಾಣಕ್ಕಾಗಿ ಸಮೀಕ್ಷೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬಂಸಿದಂತೆ ಮನೆಮನೆಗಳಿಗೆ ತೆರಳಿ ಸಮೀಕ್ಷೆ ಮಾಡಲಾಗುತ್ತಿದೆ. ಈ ಮೂಲಕ ಜಾತಿ ಪ್ರಮಾಣಪತ್ರವನ್ನು ಶಾಶ್ವತವಾಗಿ ದಾಖಲೆ ಮಾಡಿ ಆನ್‌ಲೈನ್ ಮೂಲಕ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದರು.

ಆದಾಯ ಪ್ರಮಾಣಪತ್ರವನ್ನು ಐದು ವರ್ಷಗಳಿ ಗೊಮ್ಮೆ ಪರಿಷ್ಕರಣೆ ಮಾಡಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರವನ್ನು ಶಾಲೆಗಳಲ್ಲಿ ಪ್ರತಿವರ್ಷ ಕೇಳ ಬಾರದು ಎಂಬ ನಿರ್ದೇಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News