ಉಳ್ಳಾಲ ದರ್ಗಾ ಅಧ್ಯಕ್ಷತೆ: ಬಹುಮತ ಸಾಬೀತುಪಡಿಸಿದ ಹಾಜಿ ರಶೀದ್ ಉಳ್ಳಾಲ

Update: 2016-05-23 18:42 GMT

ಉಳ್ಳಾಲ, ಮೇ 23: ಉಳ್ಳಾಲ ದರ್ಗಾದ ಆಡಳಿತ ಮಂಡಳಿ ವಿಚಾರಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯಗಳಿದ್ದ ಹಿನ್ನೆಲೆಯಲ್ಲಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ನೇತೃತ್ವದಲ್ಲಿ ಪಂಪ್‌ವೆಲ್‌ನ ತಕ್ವಾ ಮಸೀದಿಯಲ್ಲಿ ಇಂದು ನಡೆದ ಸಭೆಯ ತೀರ್ಮಾನದಂತೆ ಸಂಜೆ ಉಳ್ಳಾಲ ದರ್ಗಾದಲ್ಲಿ ಹಾಜಿ ರಶೀದ್ ಉಳ್ಳಾಲ್ ಬಹುಮತವನ್ನು ಸಾಬೀತುಪಡಿಸಿದ್ದಾರೆ.

ಇಂದು ಬೆಳಗ್ಗೆ ಎ.ಪಿ.ಉಸ್ತಾದ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಯೆನೆಪೊಯ ಅಬ್ದುಲ್ಲ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ, ಹಾಜಿ ಕಣಚೂರು ಮೋನು, ಹೈದರ್ ಪರ್ತಿಪ್ಪಾಡಿ, ಅಬ್ದುಲ್ ಮಜೀದ್ ಉಚ್ಚಿಲ, ಅಬ್ದುಲ್ ಖಾದರ್ ಹಾಜಿ ಪಾಲ್ಗೊಂಡಿದ್ದರು.


ಸಭೆಗೆ ಉಳ್ಳಾಲ ದರ್ಗಾದ ಎರಡು ಕಡೆಯವರನ್ನು ಕರೆಸಲಾಗಿತ್ತು. ಈ ವೇಳೆ ಮಾತನಾಡಿದ ಉಳ್ಳಾಲ ದರ್ಗಾ ಸಮಿತಿಯ ‘ಅಧ್ಯಕ್ಷ’ ರಶೀದ್ ಹಾಜಿ, ತನಗೆ ಒಟ್ಟು 49 ಸದಸ್ಯರ ಪೈಕಿ 26 ಮಂದಿಯ ಬೆಂಬಲವಿದ್ದು, ಕಾನೂನು ಪ್ರಕಾರ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದರು. ಬಹುಮತವನ್ನು ಸಂಜೆ ಸಭೆ ನಡೆಸಿ ಸಾಬೀತುಪಡಿಸುವಂತೆ ಎ.ಪಿ.ಉಸ್ತಾದ್ ಸೂಚಿಸಿದರು. ಬೆಳಗ್ಗೆ ನಡೆದ ಸಭೆಯ ನಿರ್ಣಯದಂತೆ ಹಾಜಿ ರಶೀದ್ ಉಳ್ಳಾಲ ಸಂಜೆ ಉಳ್ಳಾಲ ದರ್ಗಾದಲ್ಲಿ ಎಸ್.ಎಂ. ರಶೀದ್ ಹಾಜಿ, ಕಣಚೂರು ಮೋನು, ಹೈದರ್ ಪರ್ತಿಪ್ಪಾಡಿ, ಖಾದರ್ ಎವರ್‌ಗ್ರೀನ್‌ರ ಸಮ್ಮುಖದಲ್ಲಿ 26 ಮಂದಿಯ ಬಹುಮತನ್ನು ತೋರಿಸುವ ಮೂಲಕ ತನಗಿರುವ ಬೆಂಬಲವನ್ನು ಸಾಬೀತುಪಡಿಸಿದ್ದಾರೆ. ಮೇ 26ರಂದು ಉಳ್ಳಾಲ ಖಾಝಿ ಕೂರತ್ ತಂಙಳ್ ಉಳ್ಳಾಲಕ್ಕೆ ಆಗಮಿಸಲಿದ್ದು, ಅಂದು ಎರಡು ಕಡೆಯವರನ್ನು ಕರೆದು ಬಹುಮತ ಇರುವವರಿಗೆ ಅಧಿಕೃತ ಮಾನ್ಯತೆ ನೀಡಲಿದ್ದಾರೆ ಎಂದು ಎ.ಪಿ.ಉಸ್ತಾದ್ ಸಭೆಯಲ್ಲಿ ಪ್ರಕಟಿಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಉಳ್ಳಾಲ ದರ್ಗಾ ಸಮಿತಿಯ ‘ಅಧ್ಯಕ್ಷ’ ರಶೀದ್ ಹಾಜಿ, ಇಂದು ನಡೆದ ಸಭೆಯ ತೀರ್ಮಾನದಂತೆ ತಾನು ಬಹುಮತ ಸಾಬೀತುಪಡಿಸಿದ್ದೇನೆ. ವಿವಾದ ಸುಖಾಂತ್ಯವಾಗಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News