ಮಗಳ ಕರಾಟೆ ವೆಚ್ಚಕ್ಕೆ ಆಟೊ ಮಾರಿದ ತಂದೆ!

Update: 2016-05-24 05:53 GMT

ಮಂಗಳೂರು, ಮೇ 24: ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ತನ್ನ ಮಗಳನ್ನು ಕಳುಹಿಸಿಕೊಡಲು ಹಣಕ್ಕಾಗಿ ಪರದಾಡಿ ಕೊನೆಗೆ ತನ್ನ ಸ್ವಂತ ಆಟೊ ರಿಕ್ಷಾವನ್ನೇ ಮಾರಾಟ ಮಾಡಿದ ಸ್ವಾಭಿಮಾನಿ ಅಪ್ಪ ಈಗ ಅದೇ ರಿಕ್ಷಾದಲ್ಲಿ ಚಾಲಕನಾಗಿ ದುಡಿಯುತ್ತಿದ್ದಾರೆ ಎಂದು ಮುಹಮ್ಮದ್ ಆರಿಫ್ ಪಡುಬಿದ್ರೆ ವಿಜಯ ಕರ್ನಾಟಕದಲ್ಲಿ ವರದಿ ಮಾಡಿದ್ದಾರೆ. 

ಮಂಗಳೂರು ನಗರದ ಜೆಪ್ಪು ಮಾರ್ಕೆಟ್ ಸಮೀಪದ ನಿವಾಸಿ ಶೇಖ್ ಮುಹಮ್ಮದ್ ಜಾವಿದ್, ತನ್ನ ಮಗಳು ಜಾಯಿಷಾ ಫಾತಿಮಾ ಶ್ರೀಲಂಕಾ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅದಕ್ಕೆ ಬೇಕಾಗುವಷ್ಟು ಹಣ ಅವರಲ್ಲಿ ಇರಲಿಲ್ಲ. ಖರ್ಚು ಭರಿಸಲು ಕುಟುಂಬದ ಏಕೈಕ ಆದಾಯ ಮೂಲವಾದ ಆಟೊ ರಿಕ್ಷಾವನ್ನು ಮಾರಾಟ ಮಾಡಿ ಮಗಳ ಆಸೆ ಪೂರೈಸಿದ್ದಾರೆ. 

ಮೇ 8ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುವಂತೆ ಎಲ್ಲ 10 ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳಿದ್ದರು. ಉಳಿದೆಲ್ಲ ಮಕ್ಕಳ ಪೋಷಕರು ಆರ್ಥಿಕವಾಗಿ ಶ್ರೀಮಂತರು. ಜಾಯಿಷಾ ಕುಟುಂಬಕ್ಕೆ ಅದನ್ನು ಭರಿಸಲು ಶಕ್ತಿ ಇರಲಿಲ್ಲ. ಆದರೆ ಮಗಳ ಆಸೆಗೆ ತಣ್ಣೀರೆರಚಲು ಸಿದ್ಧರಿರದ ಹಾಗೂ ಬೇರೆಯವರ ಬಳಿ ಕೈ ಚಾಚಲೂ ಸ್ವಾಭಿಮಾನ ಬಿಡದ ಜಾವೇದ್, ತನ್ನ ಆಟೊ ರಿಕ್ಷಾವನ್ನು ಪರ್ಮಿಟ್ ಸಹಿತ 2.30 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ಆ ಹಣದಿಂದ ಮಗಳ ಟಿಕೆಟ್, ವೀಸಾ, ವಾಸ್ತವ್ಯದ ಖರ್ಚು ಭರಿಸುವ ಜತೆಗೆ ಬಟ್ಟೆ, ಶೂ ಸಹಿತ ಎಲ್ಲವನ್ನೂ  ಖರೀದಿಸಿಕೊಟ್ಟಿದ್ದರು. 

ಈಗ ಮಾಲಕನಲ್ಲ, ಚಾಲಕ!

ಮಗಳು ಶ್ರೀಲಂಕಾಕ್ಕೆ ಹೋಗಿ ನಾನಾ ದೇಶದ ಮಕ್ಕಳ ಜತೆ ಸ್ಪರ್ಧಿಸಿ ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದೂ ಬಂದಳು. 
ಮುದ್ದಿನ ಮಗಳ ಸಾಧನೆ ಕಂಡು ಅಪ್ಪ, ಅಮ್ಮನ ಸಂತೋಷಕ್ಕೆ ಪಾರವೇ ಇಲ್ಲ. ಆದರೆ ಜೀವನ ನಿರ್ವಹಣೆ ಮಾಡಬೇಕಲ್ಲ. ಈಗ ಅಪ್ಪ ತಾನು ಮಾರಿದ ಆಟೊ ರಿಕ್ಷಾದಲ್ಲೇ ಚಾಲಕನಾಗಿ ದುಡಿಯುತ್ತಿದ್ದು, ಅದರ ಮಾಲಕನಿಗೆ ಮಾಸಿಕ 5 ಸಾವಿರ ರೂ. ಪಾವತಿಸುತ್ತಿದ್ದಾರೆ. 

ಜಾವೇದ್ ರಿಗೆ ಮೂವರು ಹೆಣ್ಣು ಮಕ್ಕಳು. ಮೊದಲನೆಯವಳು ಈಗಷ್ಟೇ ಎಸೆಸೆಲ್ಸಿ ಯಲ್ಲಿ ಉತ್ತೀರ್ಣಳಾಗಿದ್ದು, ಅವಳ ಮುಂದಿನ ಶಿಕ್ಷಣಕ್ಕೆ ಹೆಚ್ಚಿನ ಹಣ ಬೇಕು. ಎರಡನೆಯವಳು ಏಳನೆ ತರಗತಿ. ಮೂರನೆಯವಳೇ ಜಾಯಿಷಾ ಫಾತಿಮಾ. ಮಂಗಳೂರಿನ ರೆಡ್ ಕ್ಯಾಮೆಲ್ ಇಸ್ಲಾಮಿಕ್ ಸ್ಕೂಲ್ ನ 2ನೆ ತರಗತಿಯ ವಿದ್ಯಾರ್ಥಿನಿ.

ಈಕೆ ಪ್ರತಿಭಾನ್ವಿತೆ: 

ಜಾವೇದ್ ಹಲವು ವರ್ಷ ಗಳಿಂದ ಆಟೊ ಚಾಲಕನಾಗಿ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದು, ಇದೇ ಪರಿಚಯದಿಂದ ರೆಡ್ ಕ್ಯಾಮೆಲ್ ನ ಆಡಳಿತ ಮಂಡಳಿ ಅವರ ಕಿರಿಯ ಮಗಳ ಕಲಿಕೆಗೆ ಅವಕಾಶ ನೀಡಿ ಪ್ರೋತ್ಸಾಹಿಸಿದೆ. ಶಾಲೆಯಲ್ಲಿ ಕಲಿಕೆಯ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಪ್ರತಿಭಾನ್ವಿತೆ. ಏಳು ವರ್ಷ ಪ್ರಾಯದಲೇ ಪವಿತ್ರ ಕುರ್ ಆನ್ ನ ಕೊನೆಯ 37 ಅಧ್ಯಾಯ ಕಂಠಪಾಠ ಮಾಡಿದ್ದಾಳೆ. ಮೂರು ವರ್ಷದಿಂದ ಕರಾಟೆ ಕಲಿಯುತ್ತಿದ್ದಾಳೆ. 

'ನಮ್ಮ ಕುಟುಂಬದಲ್ಲೇ ಹೆಣ್ಣು ಮಗಳೊಬ್ಬಳಿಗೆ ವಿದೇಶಕ್ಕೆ ತೆರಳುವ ಅವಕಾಶ ಸಿಕ್ಕಿದ್ದು, ಅದನ್ನು ಬಿಡುವ ಸ್ಥಿತಿಯಲ್ಲಿರಲಿಲ್ಲ. ಕುಟುಂಬದಲ್ಲಿ ಶ್ರೀಮಂತರು ಇದ್ದರೂ  ನಮಗೆ ಸ್ವಾಭಿಮಾನ ಮುಖ್ಯ. ಮಕ್ಕಳ ಸಾಧನೆಯೇ ನಮ್ಮ ಉದ್ದೇಶ' ಎನ್ನುತ್ತಾರೆ ಜಾಯಿಷಾಳ ತಾಯಿ ಕೌಸರ್. 

ಮೂವರು ಹೆಣ್ಣು ಮಕ್ಕಳನ್ನೂ ಚೆನ್ನಾಗಿ ಓದಿಸಬೇಕೆಂದು ಬಯಸಿದ್ದೇನೆ. ಸಣ್ಣವಳು ವಿಶ್ವಮಟ್ಟದ ಸ್ಪರ್ಧೆಗೆ ಆಯ್ಕೆಯಾದಾಗ ಖರ್ಚಿಗೆ ಬೇರೆ ದಾರಿ ಇಲ್ಲದೆ ನನ್ನ ಆದಾಯದ ಏಕೈಕ ಮೂಲವಾದ ಆಟೊ ರಿಕ್ಷಾ ಮಾರಿದ್ದೇನೆ. ಮಗಳು ಚಿನ್ನ, ಬೆಳ್ಳಿ ಗೆದ್ದು ಬಂದಿದ್ದಾಳೆ. ನಾನೀಗ ಅದೇ ರಿಕ್ಷಾದಲ್ಲಿ ಚಾಲಕನಾಗಿ ದುಡಿಯುತ್ತಿದ್ದೇನೆ. ಮುಂದೆ ಆಟೊ ಖರೀದಿಸುವ ವಿಶ್ವಾಸ ಇದೆ. 

- ಶೇಖ್ ಮುಹಮ್ಮದ್ ಜಾವೇದ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News