ಸ್ವಂತ ಕಾರ್ಯಕ್ಕಾಗಿ ಕೇಜ್ರಿವಾಲ್ ಮೋದಿಯೊಂದಿಗೂ ಕೈಜೋಡಿಸಬಲ್ಲರು: ಪ್ರಶಾಂತ್ ಭೂಷಣ್
ವಾಷಿಂಗ್ಟನ್, ಮೇ 24: ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಯಾವುದಕ್ಕೂ ಹೇಸದ ವ್ಯಕ್ತಿಯೆಂದು ಅವರ ಮಾಜಿ ಸಹವರ್ತಿ ಪ್ರಶಾಂತ್ ಭೂಷಣ್ ಉಗ್ರ ಟೀಕೆ ಮಾಡಿದ್ದಾರೆ. ಕೇಜ್ರಿವಾಲ್ ಏನು ಮಾಡಲೂ ಹಿಂಜರಿಯಲಾರರು. ಸ್ವಂತಕ್ಕಾಗಿ ಅವರು ಪ್ರಧಾನಿ ಮೋದಿಯೊಂದಿಗೂ ಕೈಜೋಡಿಸಬಲ್ಲರು ಎಂದು ಭೂಷಣ್ ಗುಡುಗಿದ್ದಾರೆ.
"ಕೇಜ್ರಿವಾಲ್‌ರಿಗೆ ಆದರ್ಶವಿಲ್ಲ. ಕಾರ್ಯಸಾಧನೆಗೆ ಅವರು ಮೋದಿಯೊಂದಿಗೂ ಕೈಜೋಡಿಸಬಲ್ಲರು, ಈ ವಿಷಯದಲ್ಲಿ ನನಗೆ ಯಾವ ಸಂದೇಹವೂ ಇಲ್ಲ" ಎಂದು ಭೂಷಣ್ ಹೇಳಿದ್ದಾರೆ. ಅದರೆ ಒಂದು ವರ್ಷಗಳಿಂದ ದಿಲ್ಲಿ ಸರಕಾರ ಮತ್ತು ಕೆಂದ್ರಸರಕಾರದ ನಡುವೆ ಭಿನ್ನಮತ ನೆಲೆಯೂರಿದೆ. ತನ್ನನ್ನೂ ಯೋಗೇಂದ್ರ ಯಾದವ್‌ರನ್ನೂ ಜನರ ವಿಶ್ವಾಸ ಗಳಿಸಲಿಕ್ಕಾಗಿ ಕೇಜ್ರಿವಾಲ್ ಬಳಸಿಕೊಂಡರು ಎಂದು ಭೂಷಣ್ ಆರೋಪಿಸಿದ್ದಾರೆ. ಅದೇ ವೇಳೆ ಪಾರ್ಟಿಯ ನೀತಿರೂಪಣೆಯಲ್ಲಿ ತನಗೆ ಬಹುಮತ ಇದೆ ಎಂದು ಖಚಿತಗೊಳಿಸಿ ಸ್ವಂತ ಅಜೆಂಡಾವನ್ನು ಕೇಜ್ರಿವಾಲ್ ಜಾರಿಗೊಳಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಕೇಜ್ರಿವಾಲ್‌ರ ಭ್ರಷ್ಟಾಚಾರ ವಿರೋಧಿ ಹೋರಾಟ ಕಪತನದ್ದಾಗಿದೆ. ಸ್ವಂತ ಪಕ್ಷದವರ ಭ್ರಷ್ಟಾಚಾರವನ್ನು ಕಂಡೂ ಕಾಣದಂತೆ ನಟಿಸುತ್ತಿದ್ದಾರೆ. ಹಲವಾರು ಶಾಸಕರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳು ಕೇಜ್ರಿವಾಲ್‌ರಿಗೆ ತಿಳಿದಿದೆ. ಪಾರ್ಟಿಯಲ್ಲಿರುವವರ ಭ್ರಷ್ಟಾಚಾರದ ಕುರಿತು ಮೊದಲು ಕೇಜ್ರಿವಾಲ್ ಉತ್ತರಿಸಬೇಕೆಂದು ಭೂಷಣ್ ಸವಾಲು ಹಾಕಿದ್ದಾರೆ. ವಾಷಿಂಗ್ಟನ್‌ನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭದಲ್ಲಿ ಪ್ರಶಾಂತ್ ಭೂಷಣ್ ಹೀಗೆ ಹೇಳಿದ್ದಾರೆ.