ಆಹಾರದಲ್ಲಿ ಪೊಟಾಶಿಯಂ ಬ್ರೋಮೇಟ್ ನಿಷೇಧಕ್ಕೆ ಆಹಾರ ಸುರಕ್ಷಾ ಪ್ರಾಧಿಕಾರ ಶಿಫಾರಸು
ಹೊಸದಿಲ್ಲಿ, ಮೇ 24: ಬ್ರೆಡ್‌ನಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕವಿದೆಯೆಂಬ ಸಿಎಸ್‌ಇ ಅಧ್ಯಯನದ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳೊಳಗೆ ಆಹಾರದಲ್ಲಿ ಪೊಟಾಶಿಯಂ ಬ್ರೋಮೇಟ್‌ನ ಬಳಕೆಯನ್ನು ನಿಷೇಧಿಸಲು ಸರಕಾರ ಸಿದ್ಧತೆ ನಡೆಸಿದೆ.
ಪೊಟಾಶಿಯಂ ಬ್ರೋಮೇಟ್, ಆಹಾರ ವ್ಯವಹಾರದಲ್ಲಿ ಅನುಮತಿಸಲ್ಪಟ್ಟಿರುವ 11 ಸಾವಿರ ಆಹಾರ ಕೂಟಕಗಳಲ್ಲಿ ಒಂದಾಗಿದೆ. ಎಚ್ಚರಕೆಯ ಪರಿಶೀಲನೆಯ ಬಳಿಕ, ಅನುಮತಿತ ಕೂಟಕಗ ಪಟ್ಟಿಯಿಂದ ಪೊಟಾಶಿಯಂ ಬ್ರೋಮೇಟನ್ನು ತೆಗೆಯಲು ಭಾರತದ ಆಹಾರ ಸುರಕ್ಷಾ ಮಾನದಂಡ ಪ್ರಾಧಿಕಾರವು ನಿರ್ಧರಿಸಿದೆಯೆಂದು ಎಫ್‌ಎಸ್‌ಎಸ್‌ಎಐಯ ಸಿಇಒ ಪವನ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಅನುಮತಿತ ಸರಕಾರ ಕೂಟಕಗಳ ಪಟ್ಟಿಯಿಂದ ಪೊಟಾಶಿಯಂ ಬ್ರೋಮೇಟನ್ನು ತೆಗೆಯುವಂತೆ ಪ್ರಾಧಿಕಾರವು ಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.
ಇದೇ ವೇಳೆ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವರದಿಯೊಂದನ್ನು ನೀಡುವಂತೆ ತನ್ನ ಸಚಿವಾಲಯವು ಎಫ್‌ಎಸ್‌ಎಸ್‌ಎಐಗೆ ಸೂಚಿಸಿದೆ. ಅದು ವರದಿ ನೀಡಲಿದೆ. ಅದರಂತೆ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಲಿದೆ. ವರದಿ ಬಂದೊಡನೆಯೇ ತ್ವರಿತವಾಗಿ ಕ್ರಮ ಕೈಗೊಳ್ಳುತ್ತೇವೆಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.