ಇಂಡಿಯಾ ಗೇಟ್‌ನಲ್ಲಿ ‘ಬಿಗ್ ಬಿ’ ಆತಿಥ್ಯದಲ್ಲಿ ಕಾರ್ಯಕ್ರಮ
ಹೊಸದಿಲ್ಲಿ, ಮೇ 24: ಕೇಂದ್ರ ಸರಕಾರದ 2ನೆ ವರ್ಷಾಚರಣೆಯ ಪ್ರಯುಕ್ತ ಮೆಗಾಸ್ಟಾರ್ ಅಮಿತಾಭ್‌ಬಚ್ಚನ್ ಮೇ 28ರಂದು ಇಂಡಿಯಾ ಗೇಟ್‌ನಲ್ಲಿ ಏರ್ಪಡಿಸಲಿರುವ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಹೆಚ್ಚಿನ ಸಂಪುಟ ಸಹೋದ್ಯೋಗಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಸರಕಾರ ಸಂಘಟಿಸಲಿರುವ-ಜರಾ ಮುಸ್ಕುರಾ ದೋ (ಸ್ವಲ್ಪ ನಗಿ) ಕಾರ್ಯಕ್ರಮದಲ್ಲಿ ಸರಕಾರದ ಸಾಧನೆಯನ್ನು ಬಿಂಬಿಸುವ ಅನೇಕ ಪ್ರದರ್ಶನಗಳು ಹಾಗೂ ಕಾರ್ಯಕ್ರಮಗಳು ನಡೆಯಲಿವೆ.
ಪ್ರದರ್ಶನವನ್ನು ದೂರದರ್ಶನದಲ್ಲಿ ದೇಶಾದ್ಯಂತ ಪ್ರಸಾರ ಮಾಡಲಾಗುವುದು.
ಪ್ರದರ್ಶನದಲ್ಲಿ ಮುಖ್ಯವಾಗಿ ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ ಹಾಗೂ ಗ್ರಾಮೀಣ ವಿದ್ಯುದೀಕರಣಗಳಂತಹ ಅನೇಕ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೇಲೆ ಬೆಳಕು ಚೆಲ್ಲಲಾಗುವುದು.
ಮೋದಿ ಸರಕಾರ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಸಂಬಂಧ ಇತರ ಅನೇಕ ನಗರಗಳಲ್ಲೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಪ್ರದರ್ಶನದ ಸಿದ್ಧತೆಯ ಮೇಲ್ವಿಚಾರಣೆಗಾಗಿ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ನೇತೃತ್ವದಲ್ಲಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪೀಯೂಷ್ ಗೋಯಲ್ ಹಾಗೂ ರಾಜ್ಯವರ್ಧನ್ ಸಿಂಗ್ ರಾಥೋರ್ ಸದಸ್ಯರಾಗಿರುವ ಸಚಿವ ಸಮಿತಿಯೊಂದನ್ನು ಸರಕಾರ ರಚಿಸಿದೆ.
ಸಮಿತಿಯು ಪ್ರಾಮುಖ್ಯ ನೀಡಬೇಕಾಗಿರುವ ಕಾರ್ಯಕ್ರಮಗಳ ಕುರಿತು ವಿಸ್ತೃತ ಚರ್ಚೆ ನಡೆಸಿದೆ.