ರಸ್ತೆ ಬದಿ ಹೊಟೇಲ್‌ನ ಭೋಜನ ಸವಿದ ಒಬಾಮ

Update: 2016-05-24 17:00 GMT

   ಹನೋಯ್,ಮೇ 24: ಗ್ರಾಹಕರಿಗೆ ಎಂದಿನಂತೆ ವೈವಿಧ್ಯಮಯ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದ ಇಲ್ಲಿನ ರಸ್ತೆಬದಿಯ ರೆಸ್ಟಾರೆಂಟೊಂದರ ಮಾಲಕಿಗೆ ಸೋಮವಾರ ರಾತ್ರಿ ಅಚ್ಚರಿಯೊಂದು ಕಾದಿತ್ತು. ಸ್ವತಃ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರೆಸ್ಟಾರೆಂಟ್‌ಗೆ ನಡೆದುಕೊಂಡು ಬಂದುದನ್ನು ಕಂಡು ಆಕೆಗೆ ತನ್ನ ಕಣ್ಣುಗಳನ್ನೇ ನಂಬಲಾಗಿಲ್ಲ. ಒಬಾಮ ಅವರು ತಾನಾಗಿಯೇ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಸ್ಟೂಲ್ ಒಂದನ್ನು ಎಳೆದು ಕಪ್ ಒಂದಲ್ಲಿ ಸಿದ್ಧವಾಗಿದ್ದ ವಿಯೆಟ್ನಾಂನ ಪ್ರಸಿದ್ಧ ‘ಬೂನಾ ಚಾ’ ಸೂಪ್ ಅನ್ನು ಸುರಿದರು ಮತ್ತು ನಿಧಾನವಾಗಿ ಅದನ್ನು ಸವಿಯತೊಡಗಿದರು.

ತನ್ನ ಮೂರು ದಿನಗಳ ವಿಯೆಟ್ನಾಂ ಪ್ರವಾಸದ ನಡುವೆ ಸೋಮವಾರ ರಾತ್ರಿತುಸು ಬಿಡುವು ಮಾಡಿಕೊಂಡ ಒಬಾಮ ಅವರು ಖ್ಯಾ ಖಾದ್ಯ ತಜ್ಞ ಆ್ಯಂಟನಿ ಬುರ್ಡೊನ್ ಜೊತೆ ನಿಗುವೆನ್ ತಿ ಲಿಯೆನ್ ಅವರ ರೆಸ್ಟಾರೆಂಟ್‌ಗೆ ಭೇಟಿ ನೀಡಿದ್ದರು. ಸ್ಥಳದಲ್ಲಿ ಕೆಲವು ವಿದೇಶಿ ಟಿವಿ ವರದಿಗಾರರು ಅಡ್ಡಾಡುತ್ತಿದ್ದುದನ್ನು ಆಕೆ ಗಮನಿಸಿದ್ದರಾದರೂ, ಸ್ವತಃ ಆಮೆರಿಕದ ಅಧ್ಯಕ್ಷರೇ ಇಲ್ಲಿಗೆ ಆಗಮಿಸುವರೆಂಬ ಬಗ್ಗೆ ಆಕೆ ಊಹಿಸಿಯೇ ಇರಲಿಲ್ಲ.

 ಒಬಾಮ ಭೇಟಿಯ ಹಿನ್ನೆಲೆಯಲ್ಲಿ ಅಮೆರಿಕದ ಬೇಹುಗಾರ ದಳ ಹಾಗೂ ಸ್ಥಳೀಯ ಪೊಲೀಸರ, ನಿಗುವೆನ್ ತಿ ಲಿಯೆನ್ ಅವರ ರೆಸ್ಟಾರೆಂಟ್‌ಅಕ್ಕಪಕ್ಕದ ಅಂಗಡಿಗಳನ್ನು ಸಂಜೆಯ ವೇಳೆಗೆ ಮುಚ್ಚಿಸಿಬಿಟ್ಟಿದ್ದರು. ಆದಾಗ್ಯೂ ರೆಸ್ಚಾರೆಂಟ್‌ನ ಹೊರಗಡೆ ಜಮಾಯಿಸಿದ್ದ ಭಾರೀ ಸಂಖ್ಯೆಯ ಜನರು ಒಬಾಮ ಅವರನ್ನು ಕಂಡು ಹರ್ಷೋದ್ಗಾರ ಮಾಡಿದರು.

 ಆ್ಯಂಟನಿ ಬುರ್ಡೊನ್ ಜೊತೆ ರೆಸ್ಟಾರೆಂಟ್‌ನಲ್ಲಿ ರಾತ್ರಿಯ ಭೋಜನ ಮಾಡಿದ ಬಳಿಕ ಒಬಾಮ ಅಲ್ಲಿಂದ ನಿರ್ಗಮಿಸಿದರು. ಹೋಗುವಾಗ ಭೋಜನದ ಬಿಲ್ 6 ಡಾಲರ್‌ನ್ನು ಅವರು ಚೆಕ್‌ರೂಪದಲ್ಲಿ ಪಾವತಿಸಿದ್ದಾರೆಂದು ಆ್ಯಂಟನಿ ಬುರ್ಡೊನ್ ಆನಂತರ ಟ್ವೀಟ್ ಮಾಡಿದ್ದಾರೆ.

  ಅಮೆರಿಕ ಅಧ್ಯಕ್ಷರ ಸರಳತೆಗೆ ತಾನು ಮಾರುಹೋಗಿರುವುದಾಗಿ ನಿಗುವೆನ್ ಹೇಳಿದ್ದಾರೆ. ‘‘ ಒಬಾಮ ಎಲ್ಲರಿಗೂ ಅಚ್ಚುಮೆಚ್ಚು’’ ಎಂದು ಆಕೆ ಪ್ರಶಂಸಿಸಿದರು. ಆದಾಗ್ಯೂ ಅವರ ಜೊತೆ ಫೋಟೋ ತೆಗೆದುಕೊಳ್ಳದೆ ಇದ್ದುದಕ್ಕಾಗಿ ವಿಷಾದಿಸಿದರು.

ವಿಯೆಟ್ನಾಂ ಆರೋಗ್ಯಕರ ಖಾದ್ಯಗಳಿಗಾಗಿ ಹೆಸರುವಾಸಿಯಾಗಿದೆ. ಆದರೆ ಒಬಾಮ ರೆಸ್ಚಾರೆಂಟ್‌ನಲ್ಲಿ ಆಯ್ಕೆ ಮಾಡಿದ್ದ ‘ಬನ್‌ಚಾ’ ಸೂಪ್ ಅಧಿಕ ಪ್ರಮಾಣದಲ್ಲಿ ಪ್ರಾಣಿಜನ್ಯ ಕೊಬ್ಬಿನಂಶದಿಂದ ಕೂಡಿದೆ. ಆರೋಗ್ಯಕರ ಖಾದ್ಯ ಸೇವನೆಯ ಬಗ್ಗೆ ಸುದೀರ್ಘ ಸಮಯದಿಂದ ಪ್ರಚಾರ ಮಾಡುತ್ತಿರುವ ಒಬಾಮ ಪತ್ನಿಗೆ ಮಿಶೆಲ್‌ಗೆ, ಪತಿ ಕೊಬ್ಬಿನಂಶ ಅಧಿಕವಿರುವ ಸೂಪ್ ಸೇವನೆಯಿಂದ ಇರಿಸುಮುರಿಸಾಗಿರಲೂ ಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News