ಗುರುವಾಯನಕೆರೆ: ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತಿದೆ ಈ ಸರಕಾರಿ ಶಾಲೆ

Update: 2016-05-25 16:06 GMT

ಬೆಳ್ತಂಗಡಿ, ಮೇ 25: ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುವುದಿಲ್ಲ ಎಂದು ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ದೂರು ಒಂದೆಡೆಯಾದರೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲೊಂದು ಸರಕಾರಿ ಪ್ರೌಢಶಾಲೆ ಖಾಸಗಿ ಶಾಲೆಗಳನ್ನೂ ಮೀರಿಸುವ ರೀತಿಯಲ್ಲಿ ಸತತವಾಗಿ ಐದು ವರ್ಷಗಳಿಂದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶವನ್ನು ಪಡೆದುಕೊಂಡು ರಾಜ್ಯಕ್ಕೆ ಮಾದರಿಯಾಗಿ ಮುನ್ನಡೆಯುತ್ತಿದೆ.

ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಪೇಟೆಯ ಸನಿಹ ಗುಡ್ಡದಮೇಲಿರುವ ಪುಟ್ಟ ಶಾಲೆಯ ಸಾಧನೆಗಳು ಒಂದೆರಡಲ್ಲ. ತಾಲೂಕಿನ ಏಕೈಕ ಐಪಿಎಸ್ ಅಧಿಕಾರಿಯೂ ಇದೇ ಶಾಲೆಯಿಂದ ಬಂದಿರುವವರಾಗಿದ್ದಾರೆ ಎಂದರೆ ಇದರ ಹಿರಿಮೆಯನ್ನು ತಿಳಿಯಬಹುದಾಗಿದೆ.

ಈ ಶಾಲೆಗೆ ಬರುವವರು ಯಾರೂ ಶ್ರೀ ಮಂತರ ಮನೆಯ ಮಕ್ಕಳಲ್ಲ, ಮೂರು ಹೊತ್ತಿನ ಊಟಕ್ಕೂ ಪರದಾಡುವ ಬಡ ಕೂಲಿಕಾರ್ಮಿಕರ ಮಕ್ಕಳೇ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಬರೆದ ಎಲ್ಲ ಮಕ್ಕಳೂ ಬಿಪಿಎಲ್ ಕುಟುಂಬಗಳಿಂದ ಬಂದವರೇ ಆಗಿದ್ದರು. ಅದರಲ್ಲಿಯೂ 38 ಮಂದಿ ಮಕ್ಕಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರೆ ಹಾಗೂ ಆರು ಮಂದಿ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಟ್ಯೂಶನ್ ವಿಚಾರ ಇಲ್ಲಿನ ಮಕ್ಕಳಿಗೆ ಗೊತ್ತೇ ಇಲ್ಲ. ಮನೆಯಲ್ಲಿ ಹೇಳಿಕೊಡುವವರು ಇಲ್ಲ ಆದರೂ ಈ ಶಾಲೆಯ ಮಕ್ಕಳ ಸಾಧನೆ ಯಾವ ಖಾಸಗೀ ಶಾಲೆಯನ್ನೂ ಮೀರಿಸುವಂತಿದೆ.ಇಲ್ಲಿ ಶಿಕ್ಷಣ ಪಡೆದ ಅನೂಪ್ ಶೆಟ್ಟಿ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ಪಡೆದು ಇದೀಗ ಐಪಿಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಗುರುವಾಯನಕೆರೆ ಶಾಲೆ ಮೊದಲಿನಿಂದಲೂ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬರುತ್ತಿತ್ತು. 2012 ರಿಂದೀಚೆಗೆ ಸತತವಾಗಿ ಶೇ.100 ಫಲಿತಾಂಶ ಬರುತ್ತಿದೆ. ಈ ವರ್ಷ ಇಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇಬ್ಬರು 600ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರೆ, 37 ಮಂದಿ 500ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೇ ಉತ್ತೀರ್ಣರಾಗಿದ್ದಾರೆ.

ಈ ಶಾಲೆಗೆ ಸಮೀಪದ ಹಳ್ಳಿಗಳಿಂದ ವಿದ್ಯಾರ್ಥಿಗಳು ಎಂಟನೆ ತರಗತಿಗೆ ಬರುತ್ತಾರೆ. ಯಾವುದೇ ರೀತಿಯ ಅಂಕಗಳ ನಿಬಂಧನೆಗಳೂ ಇಲ್ಲದೆ ಬರುವ ಎಲ್ಲರಿಗೂ ಇಲ್ಲಿ ಕಲಿಯುವ ಅವಕಾಶವನ್ನು ನೀಡಲಾಗುತ್ತದೆ. ಶಾಲೆಗೆ ಬಂದ ಬಳಿಕ ವಿದ್ಯಾರ್ಥಿಗಳನ್ನು ಉತ್ತಮ ರೀತಿಯಲ್ಲಿ ಕಲಿಸಿ ಅಂತಿಮ ಪರೀಕ್ಷೆಗೆ ಸಿದ್ದಗೊಳಿಸುವ ಕಾರ್ಯವನ್ನು ಇಲ್ಲಿನ ಶಿಕ್ಷಕರು ಮಾಡುತ್ತಿದ್ದಾರೆ. ಶಿಕ್ಷಕರ ನಿರಂತರ ಪ್ರಯತ್ನದ ಫಲವಾಗಿಯೇ ಶಾಲೆ ಉತ್ತಮ ಫಲಿತಾಂಶವನ್ನು ಪಡೆಯುತ್ತಿದೆ. ಈ ಶಾಲೆಯ ಶಿಕ್ಷಕರು ಕೇವಲ ಶಾಲಾ ಅವಧಿಯ ಕಾರ್ಯಕ್ಕೆ ಮಾತ್ರ ಎಂದೂ ಸೀಮಿತರಾದವರಲ್ಲ. ಶಾಲೆಗೆ ಬರುವ ಪ್ರತಿಯೊಂದು ಮಗುವಿನ ಹಿನ್ನಲೆಯನ್ನೂ ತಿಳಿದುಕೊಂಡು ಅವರ ಮನೆಗಳಿಗೆ ತೆರಳಿ ಪೋಷಕರ ಸಮಸ್ಯೆಗಳನ್ನೂ ತಿಳಿದುಕೊಂಡು ಆಯಾ ಮಕ್ಕಳಿಗೆ ಬೇಕಾದ ಹಾಗೆ ನೆರವಾಗುವ ಅವರಲ್ಲಿ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತಲೇ ಮಕ್ಕಳನ್ನು ಬೆಳೆಸುತ್ತಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಬೆಳಗ್ಗೆ ಐದು ಗಂಟೆಗೆ ಎದ್ದು ಓದುವಂತೆ ನೋಡಿಕೊಳ್ಳುತ್ತಾರೆ. ಬೆಳಗ್ಗೆ ಎದ್ದ ವಿದ್ಯಾರ್ಥಿಗಳು ಶಿಕ್ಷಕರ ದೂರವಾಣಿಗೆ ಮಿಸ್ ಕಾಲ್ ನೀಡಿ ತಾವು ಓದಲು ಆರಂಭಿಸಿದ್ದೇವೆ ಎಂಬ ಸೂಚನೆಯನ್ನು ನೀಡುತ್ತಾರೆ. ಆಗಾಗ ನಡೆಯುತ್ತಿರುವ ಪೋಷಕರ ಸಭೆಗಳಿಗೆ ಎಲ್ಲ ಪೋಷಕರೂ ಭಾಗವಹಿಸುತ್ತಾರೆ. ಮಕ್ಕಳ ಹಾಜರಾತಿಯ ಬಗ್ಗೆಯೂ ಹೆಚ್ಚಿನ ಜಾಗ್ರತೆ ವಹಿಸುತ್ತಾರೆ. ಗೈರು ಹಾಜರಾದರೆ ಆಗಲೆ ಮನೆಯವರನ್ನು ಸಂಪರ್ಕಿಸುವ ಕಾರ್ಯ ಮಾಡುತ್ತಾರೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದರ ವರೆಗೆ ಶಿಕ್ಷಕರು ಮಕ್ಕಳು ಶಾಲೆಯಲ್ಲಿದ್ದು ಕಲಿಕೆಯ ಕಾರ್ಯ ಮಾಡುತ್ತಾರೆ. ಬಹುತೇಕ ರಜಾ ದಿನಗಳಲ್ಲಿ ಹಾಗೂ ಅಕ್ಟೋಬರ್ ರಜೆಯಲ್ಲಿಯೂ ತರಗತಿಗಳು ನಡೆಯುತ್ತಿರುತ್ತದೆ. ಶಿಕ್ಷಕರು, ಅಡುಗೆಯವರೂ ರಜಾದಿನಗಳೆನ್ನದೆ ಶಾಲೆಗೆ ಬರುತ್ತಾರೆ.

ಸ್ಥಳೀಯರಾದ ರಮೇಶ್ ಬಂಗೇರ ನೇತೃತ್ವದಲ್ಲಿ ಒಂದು ಉತ್ತಮವಾದ ಶಾಲಾಭಿವೃದ್ದಿ ಸಮಿತಿಯೂ ಇಲ್ಲಿದೆ. ಸ್ಥಳೀಯರು ಯಾರೂ ಶಾಲೆಗೆ ಯಾವುದಕ್ಕೂ ಕಡಿಮೆ ಮಾಡಿದವರಲ್ಲ. ಶಾಲೆಯ ಎಲ್ಲ ಅಗತ್ಯಗಳಿಗೂ ಮುಂದೆ ನಿಂತು ಬೆಂಬಲಿಸುವ ಅಲ್ಫೋನ್ಸ್ ಫ್ರಾಂಕೋ, ಅಬ್ದುಲ್ಲತೀಫ್ ಹೀಗೆ ಊರಿನ ಹಲವರು ದಾನಿಗಳು ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಶಾಸಕವಸಂತಬಂಗೇರ ಅವರಿಗೂ ಈ ಶಾಲೆ ಅಚ್ಚು ಮೆಚ್ಚಿನದು. ಅವರು ಸದಾ ಶಾಲೆಯ ಬೆಂಬಲಕ್ಕೆ ನಿಂತಿದ್ದಾರೆ. ತಾವೇ ಖರ್ಚುಮಾಡಿ ಅಭಿನಂದನಾ ಸಮಾರಂಭವನ್ನು ಅದ್ಧೂರಿಯಾಗಿ ನಡೆಸುತ್ತಾರೆ.

ಎಲ್ಲರೂ ಎಲ್ಲ ರೀತಿಯ ಸಹಕಾರಗಳನ್ನು ಮಾಡುತ್ತಿದ್ದರೂ ಈ ಶಾಲೆಗೆ ಇನ್ನೂ ಹಲವು ಬೇಡಿಕೆಗಳಿವೆ. ಶಾಲೆಗೆ ಸುಮಾರು ಎಂಟು ಎಕರೆ ಜಾಗವಿದ್ದರೂ ಕ್ರೀಡಾಂಗಣವಿಲ್ಲ. ಅದೇರೀತಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಸಭಾಂಗಣವಿಲ್ಲ, ಪುಸ್ತಕಗಳು ಬೇಕಾದಷ್ಟಿದ್ದರೂ ವಾಚನಾಲಯದ ಕಟ್ಟಡವಿಲ್ಲ, ಇದೆಲ್ಲವನ್ನೂ ಈಡೇರಿಸುವ ಮೂಲಕ ಶಾಲೆಯ ಇನ್ನಷ್ಟು ಪ್ರಗತಿಗೆ ಸರಕಾರ ಶ್ರಮಿಸಬೇಕಾಗಿದೆ ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.

ಸರಕಾರಿ ಶಾಲೆಯನ್ನು ಮಾದರಿಯಾಗಿ ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಶಿಕ್ಷಕರು, ಪೋಷಕರು, ಶಾಲಾಭಿವೃದ್ದಿ ಸಮಿತಿ, ಇಲಾಖಾಧಿಕಾರಿಗಳ ಹಾಗೂ ಮಕ್ಕಳ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಕಲಿಕೆಯಲ್ಲಿ ಹಿಂದಿದ್ದವರೂ ಶಾಲೆಗೆ ಬರುತ್ತಾರೆ ಅವರನ್ನು ಗುರುತಿಸಿ ಬೆಂಬಲಿಸುತ್ತೇವೆ. ಇಡೀ ವರ್ಷಕ್ಕೆ ಬೇಕಾದ ಒಂದು ಕಾರ್ಯ ತಂತ್ರವನ್ನು ರೂಪಿಸಿ ಅದನ್ನು ಜಾರಿಗೆ ತರುತ್ತೇವೆ. ಇದೇ ಯಶಸ್ಸಿನ ಗುಟ್ಟಾಗಿದೆ.

ಪ್ರಶಾಂತ್ ಎಲ್, ಪ್ರಭಾರ ಮುಖ್ಯೋಪಾಧ್ಯಾಯರು, 

ಶಾಲೆಯಲ್ಲಿ ಶಿಕ್ಷಕರು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ, ರಜಾದಿನಗಳಲ್ಲಿಯೂ ತಮ್ಮ ಕೆಲಸಗಳನ್ನು ಬಿಟ್ಟು ಶಾಲೆಗೆ ಬಂದು ಪಾಠ ಹೇಳುತ್ತಾರೆ. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಪರೀಕ್ಷೆಯ ಸಮಯದಲ್ಲಿ ಧೈರ್ಯ ತುಂಬಿ ಮುನ್ನಡೆಸುತ್ತಾರೆ. ಅದರಿಂದಾಗಿ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡುವಂತಾಗಿದೆ.

ಶ್ವೇತಾ, ಅತಿ ಹೆಚ್ಚು (608) ಅಂಕ ಪಡೆದ ವಿದ್ಯಾರ್ಥಿನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News