×
Ad

ಪ್ರಜಾಪ್ರಭುತ್ವದ ಅಡಿಪಾಯವನ್ನೇ ನಾಶ ಮಾಡುವ ಅಪಾಯಕಾರಿ ಕಲ್ಪನೆ

Update: 2016-05-25 22:47 IST

ಮಾನ್ಯರೆ,
 
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿಯ ವರು ಈಗ ಘೋಷಣೆ ಮಾಡುತ್ತಿದ್ದಾರೆ. ನಂತರ ಕಮ್ಯುನಿಸ್ಟ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿ ಘೋಷಣೆ ಮಾಡಬಹುದು. ತದನಂತರ ಪ್ರಾದೇಶಿಕ-ಪಕ್ಷ-ಮುಕ್ತ ಭಾರತ ಮಾಡುತ್ತೇವೆ ಎಂದು ಘೋಷಿಸಬಹುದು. ಹೀಗೆ ಕೊನೆಗೆ ಏಕಪಕ್ಷೀಯ ಆಡಳಿತ ಭಾರತದಲ್ಲಿ ಹೇರಬಹುದು. ಆದರೆ ಸ್ವತಃ ಬಿಜೆಪಿ ಪಕ್ಷದೊಳಗೆಯೇ ಆಂತರಿಕ-ಪ್ರಜಾಪ್ರಭುತ್ವ ಇಲ್ಲದಿರುವಾಗ ದೇಶದ ಮೇಲೆ ಇಂತಹ ಪಕ್ಷದ ಏಕಪಕ್ಷೀಯ ಆಡಳಿತ ನೇರವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿ ಕೊಡಬಹುದು. ಅದೂ ಒಂದು ಧಾರ್ಮಿಕ ಕಟ್ಟರ್‌ವಾದಿ ಸಂಘಟನೆಯ ಕಪಿಮುಷ್ಟಿಯಲ್ಲಿರುವ ಬಿಜೆಪಿಯ ಸರ್ವಾಧಿಕಾರಿಯೊಬ್ಬ ಯಾವ ರೀತಿ ವರ್ತಿಸಬಹುದು ಎಂಬುದನ್ನು ಯೋಚಿಸಲೂ ಭಯವಾಗುತ್ತದೆ. ಯಾಕೆಂದರೆ ಭಾರತದಲ್ಲಿ ಹಿಂದೂ ಧರ್ಮವನ್ನು ಏಕೈಕ ರಾಷ್ಟ್ರೀಯ ಧರ್ಮ ಎಂದು ಘೋಷಿಸಿ ನಂತರ ಉಗ್ರವಾದ ದಮನಿಸುವ ನೆಪದಲ್ಲಿ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ದಮನಿಸಿ ಭಾರತವನ್ನು ಮುಸ್ಲಿಂ-ಕ್ರೈಸ್ತ-ಮುಕ್ತ ಅರ್ಥಾತ್ ಅಲ್ಪಸಂಖ್ಯಾತ-ಮುಕ್ತ ಭಾರತ ಮಾಡಬಹುದು, ಹಾಗೆಯೇ ನಕ್ಸಲಿಸಮ್ ದಮನಿಸುವ ನೆಪದಲ್ಲಿ ದಲಿತರನ್ನೆಲ್ಲಾ ದಮನಿಸಿ ದಲಿತ-ಮುಕ್ತ ಭಾರತ ಮಾಡಬಹುದು. ಕೊನೆಗೆ ಮನುಶಾಸ್ತ್ರ ಅನುಷ್ಠಾನಗೊಳಿಸಿ ಭಾರತವನ್ನು ಸಂವಿಧಾನ-ಮುಕ್ತ ದೇಶ ಮಾಡಬಹುದು. ಬಿಜೆಪಿಯ ಈ ವಿರೋಧಪಕ್ಷ-ಮುಕ್ತ ಮಾದರಿ ನಿಜವಾಗಿ ಜರ್ಮನಿಯ ಹಿಟ್ಲರನ ನಾಝಿ ಪಕ್ಷದ ಮಾದರಿಯಾಗಿದೆ. ಹಿಟ್ಲರ್ ಸಹಾ ನಾಝಿ ಪಕ್ಷವನ್ನು ಜರ್ಮನಿಯಲ್ಲಿ ಆಡಳಿತಕ್ಕೆ ತಂದ ಮೇಲೆ ಕ್ರಮೇಣ ವಿರೋಧ ಪಕ್ಷಗಳನ್ನೆಲ್ಲ ನಾಶ ಮಾಡಿದ. ಇದರಿಂದ ಜನರು ದಂಗೆ ಏಳಬಾರದು ಎಂಬ ಕಾರಣಕ್ಕೆ ಜನರಲ್ಲಿ ರಾಷ್ಟ್ರಭಕ್ತಿಯ ಕಣ್ಣಿನ ಪೊರೆ ಹಚ್ಚಲು ನೋಡಿದ. ಅದು ಸಫಲವಾಗಲಿಲ್ಲ ಎಂದು ಸಾಮಾನ್ಯ ಜರ್ಮನ್ನರ ಮತ್ಸರ ಹಾಗೂ ಪೂರ್ವಾಗ್ರಹವನ್ನೇ ಬಂಡವಾಳ ಮಾಡಿಕೊಂಡು ವಿನಾಕಾರಣ ಅಮಾಯಕ ಯಹೂದಿಗಳನ್ನು ಹಿಂಸಿಸತೊಡಗಿದ. ಕೊನೆಗೆ ತನ್ನ ದೇಶವನ್ನು ಎರಡನೆ ವಿಶ್ವಯುದ್ಧಕ್ಕೆ ದೂಡಿದ. ಭಾರತದಲ್ಲೂ ಈಗಿನ ಬಿಜೆಪಿ ಶುದ್ಧ ಹಿಟ್ಲರನ ನಾಝಿ ಮಾಡೆಲ್ ಅನುಸರಿಸುತ್ತಿದೆ. ಒಂದೆಡೆ ವಿರೋಧ ಪಕ್ಷಗಳನ್ನು ನಾಶ ಮಾಡುವ ಅಥವಾ ದುರ್ಬಲಗೊಳಿಸುವ ಪ್ರಕ್ರಿಯೆ ಮೆಲ್ಲಗೆ ನಡೆಯುತ್ತಿದ್ದರೆ ಇನ್ನೊಂದೆಡೆ ಬಹುಧರ್ಮೀಯ ಮತ್ತು ಬಹು-ಜಾತೀಯ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮತ್ಸರ ಮತ್ತು ಪೂರ್ವಾಗ್ರಹಗಳನ್ನು ಬಂಡವಾಳ ಮಾಡಿಕೊಂಡು ಮುಸ್ಲಿಮರ ಮತ್ತು ಕ್ರೈಸ್ತರ ವಿರುದ್ಧ ಇತರ ಧರ್ಮದ ಸಾಮಾನ್ಯ ಜನರ ಮನದಲ್ಲಿ ಕೋಮು ವಿಷ ತುಂಬಲಾಗುತ್ತಿದೆ. ಜತೆಗೆ ದಲಿತರ ವಿರುದ್ಧ ಸಹ ನಕ್ಸಲ್ ಪರ ಅನುಕಂಪವುಳ್ಳವರು ಎಂದು ತಪ್ಪುಅಭಿಪ್ರಾಯ ಹುಟ್ಟಿಸಲಾಗುತ್ತಿದೆ. ಈ ರೀತಿ ಮುಸ್ಲಿಂ, ಕ್ರೈಸ್ತ ಮತ್ತು ದಲಿತರಲ್ಲಿ ಭಯ ಮತ್ತು ಪರಕೀಯ ಮನಸ್ಥಿತಿ ಬೆಳೆಸಿ ತಮ್ಮ ವೈದಿಕ ಧರ್ಮವನ್ನು ಭಾರತದ ರಾಷ್ಟ್ರೀಯ ಧರ್ಮವನ್ನಾಗಿ ಮಾಡಿ ಅಲ್ಪಸಂಖ್ಯಾತರನ್ನು ಮತ್ತು ದಲಿತರನ್ನು ಎರಡನೆ ದರ್ಜೆಯ ನಾಗರಿಕರನ್ನಾಗಿ ಮಾಡುವ ದೂರಗಾಮಿ ಯೋಜನೆ ಬಿಜೆಪಿಯ ಈ ಕಾಂಗ್ರೆಸ್-ಮುಕ್ತ ಭಾರತ ಎಂಬ ಘೋಷಣೆಯ ಹಿಂದೆ ಅಡಗಿದೆ. ಹೀಗೆ ಪ್ರತಿಪಕ್ಷ-ಮುಕ್ತ ಬಿಜೆಪಿಯ ಕಲ್ಪನೆಯು ಭಾರತದ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಗೆದ್ದಲು ತಾಗಿಸಿ ನಾಶ ಮಾಡುವ ಅತಿ ಅಪಾಯಕಾರಿ ಕಲ್ಪನೆಯಾಗಿದೆ. ದುರಂತವೆಂದರೆ ಇನ್ನೂ ಡೈನೋಸಾರ್ ಯುಗದ ಮನಸ್ಥಿತಿಯಲ್ಲೇ ಇರುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇದನ್ನು ಅರ್ಥ ಮಾಡಿಕೊಂಡೇ ಇಲ್ಲ.

Writer - ಜಿ. ರವಿಕಿರಣ ರೈ, ಮೈಸೂರು

contributor

Editor - ಜಿ. ರವಿಕಿರಣ ರೈ, ಮೈಸೂರು

contributor

Similar News