×
Ad

ಒಂದು ಟನ್ ನೀರುಳ್ಳಿಗೆ ಸಿಕ್ಕಿದ್ದು ಕೇವಲ 1ರೂ.!

Update: 2016-05-25 23:42 IST

ಹೊಸದಿಲ್ಲಿ, ಮೇ 25: ಬೆಲೆ ಕಿ.ಗ್ರಾಂಗೆ ರೂ.100ರ ಗಡಿ ದಾಟಿ ಕಳೆದ ವರ್ಷ ಗ್ರಾಹಕರ ಕಣ್ಣಿಂದ ನೀರು ಸುರಿಸಿದ್ದ ನೀರುಳ್ಳಿ, ಇದೀಗ ಬೆಲೆಪಾತಾಳಕ್ಕಿಳಿದು ರೈತನ ಕಣ್ಣಿಂದ ನೀರು ತರಿಸುತ್ತಿದೆ.

ಈ ರೈತ ಜಿಲ್ಲಾ ಕೃಷ್ಯುತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) 1 ಟನ್‌ನಷ್ಟು ನೀರುಳ್ಳಿ ಮಾರಾಟ ಮಾಡಿ ಮನೆಗೆ ಕೊಂಡು ಹೋದುದು ಕೇವಲ 1 ರೂಪಾಯಿ!
 ನೀರುಳ್ಳಿಯ ಬೆಲೆ ಕುಸಿತ ರೈತರನ್ನು ಕಂಗೆಡಿಸಿದೆ. ಈ ಹಂಗಾಮಿನಲ್ಲಿ ಬಂಪರ್ ಬೆಲೆ ಬಂದಿದ್ದರೂ ತನ್ನಂತೆಯೇ ಹಲವು ರೈತರಿಗೆ ಸಿಕ್ಕಿದುದು ‘ಜುಜುಬಿ’ ಕಾಸು ಎಂದು 48ರ ಹರೆಯದ ದೇವಿದಾಸ್ ಪರ್ಭನೆ ಎಂಬ ಈ ರೈತ ಹೇಳುತ್ತಾರೆ.
ಬರಗಾಲ ಪೀಡಿತ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳನ್ನು ನಾವು ದಿನಾಲೂ ಕೇಳುತ್ತಿದ್ದೇವೆ. ನೀರುಳ್ಳಿ ಬೆಲೆಯು ಪಾತಾಳಕ್ಕೆ ಕುಸಿದಿರುವುದರಿಂದ ತನ್ನಂತಹ ರೈತರ ಭವಿಷ್ಯವು ಅದೇ ರೀತಿಯಾಗಬಹುದೆಂಬ ಕಳವಳವನ್ನು ಕುಟುಂಬಕ್ಕೆ ಏಕೈಕ ಆಧಾರವಾಗಿರುವ ಅವರು ವ್ಯಕ್ತಪಡಿಸುತ್ತಾರೆ.
ಪರ್ಭನೆಗೆ 2 ಎಕ್ರೆ ಕೃಷಿ ಭೂಮಿಯಿದೆ. ಅವರು ರೂ.80 ಸಾವಿರ ಖರ್ಚು ಮಾಡಿ ಅದರಲ್ಲಿ ನೀರುಳ್ಳಿ ಬೆಳೆಸಿದ್ದರು. ಮೇ 10ರಂದು ಪರ್ಭನೆ 18 ಗೋಣಿ ಚೀಲಗಳಲ್ಲಿ 952 ಕಿ.ಗ್ರಾಂ ನೀರುಳ್ಳಿಯನ್ನು ಟ್ರಕ್ಕೊಂದರಲ್ಲಿ ಪುಣೆಯ ಎಪಿಎಂಸಿಗೆ ಕಳುಹಿಸಿದ್ದರು. ಅವರಿಗೆ 10ಕಿ.ಗ್ರಾಂ ನೀರುಳ್ಳಿಗೆ ರೂ. 16ರಂತೆ-ಅಂದರೆ ಕಿ.ಗ್ರಾಂಗೆ ರೂ.1.60ರಂತೆ ಬೆಲೆ ದೊರೆಯಿತು.
ಪರ್ಭನೆಗೆ ಒಟ್ಟು ರೂ.1,523.20 ದೊರೆತವು. ಮಧ್ಯವರ್ತಿ ತನ್ನ ಕಮಿಷನ್ ಎಂದು ರೂ.91.35 ಕಿತ್ತುಕೊಂಡನು. ಕೂಲಿಯಾಗಿ ರೂ.59 ಹಾಗೂ ರೂ.18.55 ಪಾವತಿಸಬೇಕಾಯಿತು. ವಿಶೇಷ ಖರ್ಚೆಯ ರೂ.33.30 ಮುರಿದುಕೊಂಡರು. ಸಾಗಾಟ ಮಾಡಿದ ಟ್ರಕ್ ಚಾಲಕನಿಗೆ ರೂ.1,320 ಬಾಡಿಗೆ ನೀಡಲಾಯಿತು.
 ಇದೆಲ್ಲ ಕಳೆದ ಬಳಿಕ ಪರ್ಭನೆಗೆ ಮನೆಗೊಯ್ಯಲು ಉಳಿದುದು ಕೇವಲ ರೂ.1 ಮಾತ್ರ. ಆ ದಿನ ನೀರುಳ್ಳಿಯ ಬೆಲೆ ಭಾರೀ ಕುಸಿದಿದೆಯೆಂದು ಅವರಿಗೆ ಮಾಹಿತಿ ನೀಡಲಾಗಿತ್ತು.
ತಾನು ಕನಿಷ್ಠ ಕಿ.ಗ್ರಾಂಗೆ ರೂ.3 ಆದರೂ ಸಿಗಬಹುದೆಂದು ಭಾವಿಸಿದ್ದೆ. ಆದರೆ, ಇಷ್ಟೊಂದು ಕಡಿಮೆಗೆ ವ್ಯಾಪಾರವಾದುದರಿಂದ ತನಗೆ ನಿರಾಸೆಯಾಯಿತು ಎಂದು ಪರ್ಭೆನೆ ಅಲವತ್ತುಕೊಂಡಿದ್ದಾರೆ.
ನಾಲ್ಕು ತಿಂಗಳ ಕಾಲ ಬೆಳೆಯ ಬಗ್ಗೆ ಎಚ್ಚರಿಕೆ ವಹಿಸಿದೆ. ಲೋಡ್ ಶೆಡ್ಡಿಂಗ್‌ನ ಸಮಯದಲ್ಲೂ ನೀರುಳ್ಳಿ ಬೆಳೆಗೆ ನೀರುಣಿಸಿದೆ. ಲಾಭಕ್ಕೆ ಮಣ್ಣು ಹಾಕಲಿ! ತಾನು ಬೆಳೆಗೆ ಹಾಕಿದ ಖರ್ಚು ಸಹ ಹುಟ್ಟಲಿಲ್ಲವೆಂದರೆ ಏನು ಮಾಡಬೇಕು? ಎಂದವರು ಪ್ರಶ್ನಿಸುತ್ತಾರೆ.
ರೈತನ ನೋವಿನ ಬಗ್ಗೆ ಎಪಿಎಂಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪರ್ಭನೆಯ ನೀರುಳ್ಳಿ ಸಣ್ಣದು ಹಾಗೂ ಕೆಳ ದರ್ಜೆಯದಾಗಿತ್ತೆಂದು ಆತನಿಂದ ಮಾಲು ಖರೀಸಿದ ವ್ಯಾಪಾರಿ ಹೇಳಿದ್ದಾನೆಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿವೆ.
ಇದೇ ವೇಳೆ, ನಾಶಿಕದ ಲಾಸಲ್ಗಾಂವ್‌ನಿಂದ ನೀರುಳ್ಳಿ ವ್ಯಾಪಾರಿಗಳು ಹಾಗೂ ಎಪಿಎಂಸಿ ಸದಸ್ಯರ ನಿಯೋಗವೊಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರನ್ನು ಭೇಟಿಯಾಗಿ ನೀರುಳ್ಳಿ ಬೆಲೆ ಕುಸಿತದ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News