×
Ad

ಬಿಹಾರ ಪತ್ರಕರ್ತನ ಹತ್ಯೆ ಪ್ರಕರಣ: ಐವರ ಬಂಧನ

Update: 2016-05-25 23:44 IST

ಪಾಟ್ನಾ,ಮೇ 25: ಹಿರಿಯ ಪತ್ರಕರ್ತ ರಾಜದೇವ್ ರಂಜನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರ ಪೈಕಿ ರೋಹಿತ್ ಕುಮಾರ್ ಪ್ರಮುಖ ಆರೋಪಿಯಾಗಿದ್ದು, ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಎಡಿಜಿಪಿ ಸುನೀಲ್ ಕುಮಾರ್ ತಿಳಿಸಿದರು.
ಹಿಂದಿ ದೈನಿಕ ‘ಹಿಂದುಸ್ಥಾನ್’ನ ಸ್ಥಳೀಯ ಬ್ಯೂರೊ ಮುಖ್ಯಸ್ಥರಾಗಿದ್ದ ರಂಜನ್(42) ಅವರನ್ನು ಮೇ 13ರಂದು ಸಿವಾನ್ ರೈಲು ನಿಲ್ದಾಣದ ಬಳಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ಬಂಧಿತರಿಂದ ನಾಡಪಿಸ್ತೂಲು ಮತ್ತು ಎರಡು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಗುಂಡುಗಳು ಈ ಪಿಸ್ತೂಲಿನೊಂದಿಗೆ ಹೊಂದಿಕೆಯಾಗಿವೆ. ಅವರಿಂದ ಮೂರು ಬೈಕ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ತಿಳಿಸಿದರು.
ರಂಜನ್‌ಗೆ ಗುಂಡು ಹಾರಿಸಿದ್ದ ಶೂಟರ್‌ಗಳ ಪೈಕಿ ಓರ್ವನೆಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದ ಲಾದನ್ ಮಿಯಾಂ ಕೊಲೆಗಾಗಿ ರೋಹಿತ್‌ಗೆ ಸುಪಾರಿ ನೀಡಿದ್ದನೆನ್ನಲಾಗಿದೆ. ರಂಜನ್ ಹತ್ಯೆಗೆ ಕೇವಲ 15 ದಿನಗಳ ಮೊದಲು ಲಾದನ್ ಸಿವಾನ್ ಜೈಲಿನಿಂದ ಬಿಡುಗಡೆಗೊಂಡಿದ್ದ. ರಂಜನ್ ಹತ್ಯೆಯ ಎರಡು ಗಂಟೆಗಳ ಬಳಿಕ ಆತ ತನ್ನ ಕುಟುಂಬ ಸಹಿತ ಸಿವಾನ್‌ನಿಂದ ಪರಾರಿಯಾಗಿದ್ದ.
 ಕೊಲೆ ಸಂಚಿನಲ್ಲಿ ಇನ್ಯಾರಾದರೂ ಭಾಗಿಯಾಗಿದ್ದರೇ ಎನ್ನುವುದನ್ನು ಮತ್ತು ಹತ್ಯೆಯ ಹಿಂದಿನ ಕಾರಣವನ್ನು ತಿಳಿದುಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ ಎಂದು ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News