ಕೇರಳದ ಮೀನುಗಾರರ ಹತ್ಯಾ ಪ್ರಕರಣ: ಆರೋಪಿ ಇಟಲಿಯ ನಾವಿಕನಿಗೆ ಸ್ವದೇಶಕ್ಕೆ ತೆರಳಲು ಸುಪ್ರೀಂ ಅನುಮತಿ
ಹೊಸದಿಲ್ಲಿ, ಮೇ 26: ಕೇರಳದ ಮೀನುಗಾರರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ಆರೋಪಿ ಇಟಲಿಯ ಹಡಗಿನ ಸಿಬ್ಬಂದಿ ಸಾರ್ಜೆಂಟ್ ಸಾಲ್ವಟೋರ್ ಗಿರೋನ್‌ಗೆ ಸ್ವದೇಶಕ್ಕೆ ತರೆಳಲು ಇಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಸಾರ್ಜೆಂಟ್ ಸಾಲ್ವಟೋರ್ ಗಿರೋನ್ ಗೆ ಮಾನವೀಯ ನೆಲೆಯಲ್ಲಿ ಮತ್ತು ಸರಕಾರದ ಮನವಿಯಂತೆ ಸ್ವದೇಶಕ್ಕೆ ತೆರಳಲು ಅನುಮತಿ ನೀಡಲಾಗಿದ್ದು, ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವ ಮತ್ತು ನಿಗದಿಪಡಿಸಿದ ಪೊಲೀಸ್ ಸ್ಟೇಷನ್ ಗೆ ಪ್ರತಿ ತಿಂಗಳು ಹಾಜರಾಗುವ ಶರ್ತವನ್ನು ಪಾಲಿಸುವುದಾಗಿ ಭರವಸೆ ನೀಡಿದ ಬಳಿಕ ಸಾರ್ಜೆಂಟ್ ಸಾಲ್ವಟೋರ್ ಗಿರೋನ್ ಗೆ ಇಟಲಿಗೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತು. ಮಾಸ್ಸಿಮಿಲಿಯಾನೊ ಲಾಟೋರ್ ಗೆ 4 ತಿಂಗಳ ಕಾಲ ಇಟಲಿ ತೆರಳಲು ಸುಪ್ರೀಂ ಕೋರ್ಟ್ ಸೆ.12ರಂದು ಆದೇಶ ನೀಡಿದೆ.
ಕೇರಳದಲ್ಲಿ 2012ರಲ್ಲಿ ಇಟಲಿ ಹಡಗಿನ ಸಿಬ್ಬಂದಿಗಳು ಕೇರಳದ ಇಬ್ಬರು ಮೀನುಗಾರರ ಹತ್ಯೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಸಾರ್ಜೆಂಟ್ ಮಾಸ್ಸಿಮಿಲಿಯಾನೊ ಲಾಟೋರ್ ಮತ್ತು ಸಾರ್ಜೆಂಟ್ ಸಾಲ್ವಟೋರ್ ಗಿರೋನ್ ನ್ನು ಫೆ.2012ರಲ್ಲಿ ಬಂಧಿಸಲಾಗಿತ್ತು.
ಈ ಪೈಕಿ ಸಾರ್ಜೆಂಟ್ ಮಾಸ್ಸಿಮಿಲಿಯಾನೊ ಲಾಟೋರ್ ಗೆ 2014ರಲ್ಲಿ ಮೆದುಳಿನ ಪಾರ್ಶ್ವವಾಯು ಕಾಯಿಲೆಯ ಚಿಕಿತ್ಸೆಗಾಗಿ ಸ್ವದೇಶಕ್ಕೆ ತೆರಳಲು ಅನುಮತಿ ನೀಡಲಾಗಿತ್ತು. ಬಳಿಕ ಲಾಟೋರ್ ಅವರಿಗೆ ಈ ವರ್ಷದ ಸೆಪ್ಟೆಂಬರ್ 30ರವರೆಗೆ ಇಟಲಿಯಲ್ಲೇ ತಂಗಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.
ಗಿರೋನ್ ಸುಪ್ರೀಂಕೋರ್ಟ್‌ನ ಆದೇಶದಂತೆ ಹೊಸದಿಲ್ಲಿಯಲ್ಲಿರುವ ಇಟಲಿ ರಾಯಭಾರಿ ಕಚೇರಿಯಲ್ಲಿ ತಂಗಿದ್ದಾರೆ.ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಹೊರಬೀಳುವವರೆಗೆ ಇಟಲಿಗೆ ತೆರಳಲು ಅವಕಾಶ ನೀಡಬೇಕೆಂದು ಕೋರಿ ಗಿರೋನ್ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
.