ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತದ ಆದೇಶ ವಾಪಸ್

Update: 2016-05-26 12:04 GMT

ಮಂಗಳೂರು, ಮೇ 26: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ.

ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗಿದ್ದು, ನೇತ್ರಾವತಿ ನದಿಯ ಒಳಹರಿವು ಹೆಚ್ಚಾಗುತ್ತಿದೆ. ತುಂಬೆ ಕಿಂಡಿಅಣೆಕಟ್ಟಿಗೆ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟ ಸುಧಾರಿಸುತ್ತಿದೆ. ಹಾಲಿ ತುಂಬೆ ಕಿಂಡಿಅಣೆಕಟ್ಟಿನಲ್ಲಿ 8.11 ಅಡಿ ನೀರು ಸಂಗ್ರಹವಾಗಿದೆ. ಯಾವುದೇ ಹೆಚ್ಚಿನ ಒಳ ಹರಿವು ಇಲ್ಲದಿದ್ದರೂ ಕೂಡಾ ಹಾಲಿ ಇರುವ ನೀರು ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ 15 ದಿನಗಳಿಗೆ ಸರಬರಾಜು ಮಾಡಲು ಸಾಕಾಗುವಷ್ಟಿದೆ. ಹವಾಮಾನ ಇಲಾಖೆಯು ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಬರುವ ಬಗ್ಗೆ ಸೂಚನೆ ನೀಡಿದೆ.

ಕುಡಿಯುವ ನೀರಿನ ಕೊರತೆಯ ಹಿನ್ನೆಲೆಲ್ಲಿ ಎಎಂಆರ್, ಎಂಆರ್‌ಪಿಎಲ್ ಡ್ಯಾಂಗಳಿಂದ ಕೈಗಾರಿಕಾ ಉದ್ದೇಶಗಳಿಗೆ ನೀರು ಪೂರೈಕೆಯನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಆದರೆ ರಾಜ್ಯದ ಏಕೈಕ ಯೂರಿಯಾ ಘಟಕ ಎಂಸಿಎಫ್‌ನಲ್ಲಿ ಯೂರಿಯಾ ಉತ್ಪಾದನೆ ಕುಂಠಿತವಾಗಿರುವುದರಿಂದ ರಾಜ್ಯದ ಕೃಷಿ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ, ಪ್ರಸಕ್ತ ಸನ್ನಿವೇಶದಲ್ಲಿ ಆದೇಶ ಹಿಂಪಡೆಯುವುದು ಸೂಕ್ತ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News