2023ರಲ್ಲಿ ದೇಶದ ಚೊಚ್ಚಲ ಬುಲೆಟ್ ರೈಲಿನ ಸಂಚಾರ ಆರಂಭ
ಹೊಸದಿಲ್ಲಿ,ಮೇ 26: ಭಾರತದ ಪ್ರಪ್ರಥಮ ಬುಲೆಟ್ ರೈಲು 2023ರಲ್ಲಿ ತನ್ನ ಓಡಾಟವನ್ನು ಆರಂಭಿಸಲಿದೆಯೆಂದು ರೈಲ್ವೆ ಸಚಿವ ಸುರೇಶ್ ಪ್ರಭು ಗುರುವಾರ ತಿಳಿಸಿದ್ದಾರೆ.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಿದ್ದ ಅವರು, ‘‘ ಬುಲೆಟ್‌ರೈಲು 2023ರಲ್ಲಿ ಭಾರತದಲ್ಲಿ ಓಡಾಡಲಿದೆ. ಈ ಬುಲೆಟ್ ರೈಲು ಯೋಜನೆಯ ಹಂತಗಳ ಬಗ್ಗೆ ನಾವು ಈಗಾಗಲೇ ಚರ್ಚಿಸಿದ್ದೇವೆ’’ ಎಂದವರು ತಿಳಿಸಿದ್ದಾರೆ.
ಎನ್‌ಡಿಎ ಸರಕಾರದ ಮಹತ್ವಾಕಾಂಕ್ಷೆಯ ಚೊಚ್ಚಲ ಬುಲೆಟ್ ರೈಲು, ಮುಂಬೈ ಹಾಗೂ ಅಹ್ಮದಾಬಾದ್ ನಡುವೆ ಸಂಚರಿಸಲಿದ್ದು, 508 ಕಿ.ಮೀ. ದೂರವನ್ನು ಕೇವಲ 2 ತಾಸುಗಳಲ್ಲಿ ಕ್ರಮಿಸಲಿದೆ. ತಾಸಿಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಪ್ರಯಾಣಿಸುವ ಸಾಮರ್ಥ್ಯವನ್ನು ಈ ರೈಲು ಹೊಂದಿದೆ. ಈ ಯೋಜನೆಯ ಕಾಮಗಾರಿಯು ನಿಗದಿತವಾಗಿ ನಡೆಯುತ್ತಿದೆಯೆಂದು ಅವರು ಹೇಳಿದ್ದಾರೆ. 97,636 ಕೋಟಿ ವೆಚ್ಚದ ಬುಲೆಟ್ ರೈಲು ಯೋಜನೆಯ ಶೇ.81ರಷ್ಟು ಆರ್ಥಿಕ ನಿಧಿಯು,ಜಪಾನ್‌ನಿಂದ ಸಾಲದ ರೂಪದಲ್ಲಿ ಲಭಿಸಲಿದೆ. ಶೇ.1ರಷ್ಟು ವಾರ್ಷಿಕ ಬಡ್ಡಿದರದ ಈ ಸಾಲವು 50 ವರ್ಷಗಳ ಅವಧಿಯದ್ದಾಗಿದ್ದು, ಮೊದಲ 15 ವರ್ಷಗಳವರೆಗೆ ಸಾಲಪಾವತಿಯಿಂದ ರಿಯಾಯಿತಿ ನೀಡಲಾಗಿದೆ.