ಗಯಾ: ಬಿಹಾರದ ಮಾಜಿ ಸಿಎಂ ಮಾಂಝಿಯ ಬೆಂಗಾವಲು ವಾಹನಗಳಿಗೆ ಕಲ್ಲು-ಬೆಂಕಿ
ಗಯಾ, ಮೇ 26: ಬಿಹಾರದ ಗಯಾ ಜಿಲ್ಲೆಯ ದುಮಾರಿಯದಲ್ಲಿ ಗುರುವಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿಯವರ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಲಾಗಿದೆ.
ಉದ್ರಿಕ್ತ ಪ್ರತಿಭಟನಕಾರರು ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲೆಸೆದರು ಹಾಗೂ ಎಸ್ಕಾರ್ಟ್ ವಾಹನಕ್ಕೆ ಬೆಂಕಿ ಹಚ್ಚಿದರು. ಪೊಲೀಸರ 2 ಬೈಕ್‌ಗಳ ಬೆಂಕಿಗಾಹುತಿಯಾಗಿದೆ.
ಆದಾಗ್ಯೂ, ಮಾಂಝಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಎಚ್ಚರಿಕೆಯನ್ನು ಉಲ್ಲಂಘಿಸಿ, ಮಾಂಝಿಯವರು ಬುಧವಾರ ಪಂಚಾಯತ್ ಚುನಾವಣಾ ಪ್ರಚಾರದ ವೇಳೆ ಹತ್ಯೆಯಾಗಿದ್ದ ಸುದೇಶ್ ಪಾಸ್ವಾನ್ ಹಾಗೂ ಸುನೀಲ್ ಪಾಸ್ವಾನ್‌ರ ಮರಣಕ್ಕೆ ಸಂತಾಪ ಸೂಚಿಸುವುದಕ್ಕಾಗಿ ಡುಮಾರಿಯಕ್ಕೆ ಹೋಗುತ್ತಿದ್ದರು.
ಗುಂಪುನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಮಾಂಝಿಯವರ ಮೊಬೈಲ್ ಸ್ವಿಚ್ ಆಫ್‌ಆಗಿದ್ದುದರಿಂದ ಅವರನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾಯಿತು.
ಆದಾಗ್ಯೂ, ಮಾಜಿ ಮುಖ್ಯಮಂತ್ರಿಯನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆಯೆಂದು ಅವರ ಪಕ್ಷದ ವಕ್ತಾರ ದಾನಿಶ್ ರಿಜ್ವಾನ್ ಟಿಒಐಗೆ ತಿಳಿಸಿದ್ದಾರೆ. ಕಲ್ಲೆಸೆತ ಹಾಗೂ ಬೆಂಕಿ ಹಚ್ಚಿರುವುದನ್ನು ಖಚಿತಪಡಿಸಿದ ಗಯಾದ ಜಿಲ್ಲಾ ದಂಡಾಧಿಕಾರಿ ಕುಮಾರ್ ರವಿ, ಮಾಂಝಿ ಸುರಕ್ಷಿತವಾಗಿದ್ದಾರೆಂದು ಹೇಳಿದ್ದಾರೆ.