‘ಸ್ಮಾರ್ಟ್ ಫೋನ್ ಬಳಸುವಾಗ ಎಚ್ಚರ, ಬೇರೆ ಯಾರೋ ಕದ್ದಾಲಿಸಬಹುದು’
ಗೃಹ ಸಚಿವಾಲಯದ ಅಧಿಕಾರಿಗಳಿಗೆ ಗುಪ್ತಚರ ಇಲಾಖೆ ಎಚ್ಚರಿಕೆ
ಹೊಸದಿಲಿ, ಮೇ 27: ವಿದೇಶದಲ್ಲಿ ತಯಾರಾಗುವ ಹೆಚ್ಚಿನ ಸ್ಮಾರ್ಟ್ ಫೋನ್‌ಗಳು ರಹಸ್ಯ ರಾಜಿ ಮಾಡಿಕೊಂಡಿದ್ದು, ಗೃಹ ಸಚಿವಾಲಯದ ಅಧಿಕಾರಿಗಳು ಹಾಗೂ ಅರೆ ಸೇನಾಪಡೆ ಸಂಸ್ಥೆಗಳು ಸ್ಮಾರ್ಟ್‌ಫೋನ್ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು ಒಳಿತು ಎಂದು ಗುಪ್ತಚರ ಇಲಾಖೆ (ಇಂಟೆಲಿಜೆನ್ಸ್ ಬ್ಯೂರೊ) ಎಚ್ಚರಿಕೆ ನೀಡಿದೆ.
ನೆರೆಯ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುತ್ತಿರುವ ಸ್ಮಾರ್ಟ್ ಫೋನ್‌ಗಳಲ್ಲಿ ಮಾಹಿತಿಯನ್ನು ಕಲೆ ಹಾಕುವ ವೈರಸ್‌ನ್ನು ಅಳವಡಿಸಲಾಗುತ್ತಿದೆ. ಪಾಕಿಸ್ತಾನ ಹಾಗೂ ಚೀನಾದಲ್ಲಿ ವೈಫೈ ಮೂಲಕ ಕರೆ ಕದ್ದಾಲಿಕೆ ನಡೆಸುವ ಪ್ರಯತ್ನ ಮಾಡಲಾಗುತ್ತಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳನ್ನು ಯಾವುದೇ ಕಾರಣಕ್ಕೂ ಸೂಕ್ಷ್ಮ ವಿಚಾರಕ್ಕೆ ಸಂಬಂಧಿಸಿದ ಸಭೆಗಳಿಗೆ ಕೊಂಡೊಯ್ಯಬಾರದು. ಅಧಿಕೃತ ಕಂಪ್ಯೂಟರ್ ಇಲ್ಲವೇ ಲ್ಯಾಪ್‌ಟಾಪ್‌ಗೆ ಸ್ಮಾರ್ಟ್‌ಫೋನ್‌ನ್ನು ಬ್ಲುಟೂತ್ ಮೂಲಕ ಸಂಪರ್ಕ ಕಲ್ಪಿಸಬಾರದು. ಸುರಕ್ಷತೆ ಖಾತ್ರಿಯಿರುವ ಆ್ಯಪ್‌ಗಳನ್ನೇ ಬಳಸಬೇಕು. ರಹಸ್ಯ, ಸೂಕ್ಷ್ಮ ವಿಷಯ ಮಾತನಾಡುವಾಗ ಸ್ಮಾರ್ಟ್‌ಫೋನ್ ಬಳಸಬಾರದು. ಸೂಕ್ಷ್ಮ ಮಾಹಿತಿಯನ್ನು ಅಪರಿಚಿತ ವ್ಯಕ್ತಿ ಕೇಳಿದರೆ, ಕರೆ ಮಾಡಿರುವ ವ್ಯಕ್ತಿಯ ಮಾಹಿತಿ ಸಂಗ್ರಹಿಸಿ ಲ್ಯಾಂಡ್‌ಲೈನ್‌ನಲ್ಲಿ ಮರು ಕರೆ ಮಾಡಬೇಕು ಎಂದು ಏಜೆನ್ಸಿ ಎಚ್ಚರಿಸಿದೆ.