ಭಾರತೀಯ ಕಂಪೆನಿಗಳಿಂದ ಪ್ರತಿ ಎಚ್-1ಬಿ ವೀಸಾಕ್ಕೆ 2.7 ಲಕ್ಷ ರೂ. ಹೆಚ್ಚುವರಿ ವಸೂಲಿ
ವಾಶಿಂಗ್ಟನ್, ಮೇ 27: ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜಾರಿಗೆ ಬಂದಿರುವ ನೂತನ ನಿಯಮಗಳ ಪ್ರಕಾರ, ಪ್ರತಿ ಎಚ್-1ಬಿ ವೀಸಾ ಅರ್ಜಿಗೆ ಭಾರತೀಯ ಐಟಿ ಕಂಪೆನಿಗಳು ಕನಿಷ್ಠ 4,000 ಡಾಲರ್ (ಸುಮಾರು 2 ಲಕ್ಷ 70 ಸಾವಿರ ರೂಪಾಯಿ) ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ.
ಅದೇ ವೇಳೆ, ನೂತನ ನಿಯಮಗಳ ಅಡಿಯಲ್ಲಿ ಎಲ್-1 ವೀಸಾಗಳಿಗಾಗಿ ಅರ್ಜಿ ಸಲ್ಲಿಸುವ ಭಾರತೀಯ ಕಂಪೆನಿಗಳು ಅಮೆರಿಕದ ಕಂಪೆನಿಗಳಿಗಿಂತ 4,500 ಡಾಲರ್ (ಸುಮಾರು 3 ಲಕ್ಷ 3 ಸಾವಿರ ರೂಪಾಯಿ) ಹೆಚ್ಚು ಪಾವತಿಸಬೇಕಾಗಿದೆ.
ನೂತನ ನಿಯಮಗಳು 2025 ಸೆಪ್ಟಂಬರ್ 30ರವರೆಗೆ ಚಾಲ್ತಿಯಲ್ಲಿರುತ್ತವೆ.
ಅಮೆರಿಕದಲ್ಲಿ ವಿಶಿಷ್ಟ ಕೆಲಸಗಳನ್ನು ಮಾಡುವುದಕ್ಕಾಗಿ ವಿದೇಶೀಯರನ್ನು ನೇಮಿಸಲು ಅಮೆರಿಕದ ಕಂಪೆನಿಗಳಿಗೆ ಅನುವು ಮಾಡಿಕೊಡುವುದಕ್ಕಾಗಿ ಎಚ್-1ಬಿ ವೀಸಾವನ್ನು ರೂಪಿಸಲಾಗಿದೆ. ಅಮೆರಿಕ ಮತ್ತು ವಿದೇಶ- ಎರಡೂ ಕಡೆಗಳಲ್ಲಿ ಕಚೇರಿಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳಿಗೆ ಎಲ್-1 ವೀಸಾಗಳು ದೊರೆಯುತ್ತವೆ.
ವಾರ್ಷಿಕ 400 ಮಿಲಿಯ ಡಾಲರ್ (2,696 ಕೋಟಿ ರೂಪಾಯಿ) ಹೆಚ್ಚುವರಿ ಹೊರೆ ಹೊರಬೇಕಾಗಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಇದನ್ನು ‘‘ಪಕ್ಷಪಾತಪೂರಿತ’’ ಎಂಬುದಾಗಿ ಬಣ್ಣಿಸಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಈ ವಿಷಯವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರಸ್ತಾಪಿಸಿದ್ದಾರೆ.
ಯುಎಸ್ ಫೆಡರಲ್ ಸಿಟಿಝನ್‌ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವಿಸಸ್ (ಯುಎಸ್‌ಸಿಐಎಸ್) ಹೆಚ್ಚುವರಿ ಶುಲ್ಕದ ವಿವರಗಳನ್ನು ಇಂದು ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ.