ಕಾಣೆಯಾಗಿದ್ದ ಪರ್ವತಾರೋಹಿಯ ಮೃತದೇಹ ಎವರೆಸ್ಟ್‌ನಲ್ಲಿ ಪತ್ತೆ
ಕಠ್ಮಂಡು, ಮೇ 27: ವೌಂಟ್ ಎವರೆಸ್ಟ್‌ನಲ್ಲಿ ಕಾಣೆಯಾಗಿದ್ದ ಇಬ್ಬರು ಭಾರತೀಯರಲ್ಲಿ ಓರ್ವನ ಮೃತದೇಹವನ್ನು ಪರ್ವತಾರೋಹಿಗಳು ಪತ್ತೆ ಮಾಡಿದ್ದಾರೆ. ಇದೇ ವೇಳೆ, ಶಿಬಿರದಲ್ಲಿ ಸಾವಿಗೀಡಾದ ಆಸ್ಟ್ರೇಲಿಯದ ಮಹಿಳೆಯೋರ್ವಳ ಮೃತದೇಹವನ್ನು ಹೆಲಿಕಾಪ್ಟರೊಂದರಲ್ಲಿ ತರಲಾಗಿದೆಯೆಂದು ಪರ್ವತಾರೋಹಣ ಸಂಘಟಕರೊಬ್ಬರು ತಿಳಿಸಿದ್ದಾರೆ.
ಪರೇಶ್ ಚಂದ್ರನಾಥ್ ಎಂಬವರ ಮೃತದೇಹ ಎವರೆಸ್ಟ್‌ನ 8,850 ಮೀ (29,035 ಅಡಿ) ಎತ್ತರದಲ್ಲಿ ಶುಕ್ರವಾರ ಪತ್ತೆಯಾಗಿದೆ. ಅದನ್ನು 8 ಸಾವಿರ ಮೀ. ಎತ್ತರದಲ್ಲಿರುವ ಸೌತ್‌ಕೋಲ್‌ನ 4ನೆ ಶಿಬಿರಕ್ಕೆ ತರಲಾಗಿದೆಯೆಂದು ಟ್ರೆಕ್ಕಿಂಗ್ ಕ್ಯಾಂಪ್ ನೇಪಾಳಿ ಸಂಸ್ಥೆಯ ವಾಂಗ್ಚು ಶೆರ್ಪಾ ಹೇಳಿದ್ದಾರೆ.
ಇದಕ್ಕೆ ಮೊದಲು, ಆಸ್ಟ್ರೇಲಿಯನ್ ಪರ್ವತಾರೋಹಿ ಮಾರಿಯಾ ಸ್ಟ್ರೈಡಂ ಎಂಬವರ ಮೃತದೇಹವನ್ನು ಹೆಲಿಕಾಪ್ಟರ್‌ನಲ್ಲಿ ಕಠ್ಮಂಡು ನಿಲ್ದಾಣಕ್ಕೆ ತರಲಾಗಿತ್ತು. ಮೃತದೇಹದೊಂದಿಗೆ ಅವರ ಪತಿ ತ್ರಿಭುವನ ವಿವಿ ಬೋಧನಾ ಆಸ್ಪತ್ರೆಗೆ ಹೋಗಿದ್ದರು.
ಈ ತಿಂಗಳೊಂದರಲ್ಲೇ ನಾಲ್ವರು ಪರ್ವತಾರೋಹಿಗಳು ಎವರೆಸ್ಟ್‌ನಲ್ಲಿ ಅಸುನೀಗಿದ್ದಾರೆ. ಭಾರತೀಯ ಪರ್ವತಾರೋಹಿ ಗೌತಂ ಘೋಷ್ ಎಂಬವರು ಇನ್ನೂ ಪತ್ತೆಯಾಗಿಲ್ಲ. ಅವರು ಮೇ 21ರಂದು ಕಾಣೆಯಾಗಿದ್ದ ನಾಲ್ವರು ಸದಸ್ಯರ ತಂಡದಲ್ಲಿದ್ದರು. ಸುಭಾಷ್ ಪೌಲ್ ಎಂಬವರು ಮರುದಿನ ರಕ್ಷಿಸುವ ವೇಳೆ ಸಾವಿಗೀಡಾಗಿದ್ದಾರೆ. ಸುನೀತಾ ಹಝ್ರಾ ಎಂಬವರು ಅದೇ ದಿನ ಪತ್ತೆಯಾಗಿದ್ದರು.