ಶಿಕ್ಷಣ ಶುಲ್ಕ ವಿರೋಧಿಸಿ ಐಸಿಸ್ ಹೆಸರಲ್ಲಿ ವ್ಯಕ್ತಿಯಿಂದ ಶಾಲೆ ಸ್ಫೋಟಿಸುವ ಬೆದರಿಕೆ ಪತ್ರ
ಭೋಪಾಲ್, ಮೇ 27: ದೇವಾಸ್‌ನ ಇಬ್ಬರು ಮಕ್ಕಳ ತಂದೆಯೊಬ್ಬ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಹೆಸರಿನಲ್ಲಿ ತನ್ನ ಮಕ್ಕಳ ಶಾಲೆಗೆ ಬೆದರಿಕೆ ಪತ್ರ ಕಳುಹಿಸಿರುವ ವಿದ್ಯಮಾನ ವರದಿಯಾಗಿದೆ. ಬಾಕಿಯಿರುವ ಶಾಲಾ ಶುಲ್ಕವನ್ನು ಮನ್ನಾ ಮಾಡದಿದ್ದಲ್ಲಿ ಶಾಲೆಯನ್ನು ಬಾಂಬಿಟ್ಟು ಉಡಾಯಿಸಲಾಗುವುದು ಹಾಗೂ ಪ್ರಿನ್ಸಿಪಾಲರಿಗೆ ಬೆಂಕಿ ಹಚ್ಚಲಾಗುವುದೆಂದು ಆತ ಪತ್ರದಲ್ಲಿ ಬೆದರಿಕೆಯೊಡ್ಡಿದ್ದ.
ಉಸ್ಮಾನ್ ಎಂಬಾತ ಈ ರೀತಿ ಪತ್ರ ಬರೆದು ಬಿಸಿಎಂ ಸ್ಕೂಲ್‌ನ ಪ್ರಿನ್ಸಿಪಾಲ್ ವರ್ಗೀಸ್ ಜೋಸೆಫ್ ಎಂಬವರಿಗೆ ಕಳುಹಿಸಿದ್ದಾನೆ. ಪತ್ರವನ್ನು ಹಿಂದಿಯಲ್ಲಿ ಕೈಯಲ್ಲೇ ಬರೆದಿದ್ದಾನೆ. ಉಸ್ಮಾನ್‌ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಉಸ್ಮಾನ್ ತನ್ನ ಮಕ್ಕಳ ಬಾಬ್ತು ರೂ.44 ಸಾವಿರ ಶಾಲಾ ಶುಲ್ಕವನ್ನು ಪಾವತಿಸಿಲ್ಲ. ಕಳೆದ ತಿಂಗಳು ಆತನಿಗೆ ಶುಲ್ಕ ಪಾವತಿಸುವಂತೆ ಪತ್ರ ಬರೆದಾಗ ಆತ ತನಗೆ ಕೊಲೆ ಬೆದರಿಕೆ ಹಾಕಿದ್ದನು. ತಾನು ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದಾಗ ಉಸ್ಮಾನ್ ಪುನಃ ತನ್ನನ್ನು ಬೆದರಿಸಿದ್ದನೆಂದು ಜೋಸೆಫ್ ಹೇಳಿದ್ದಾರೆ.
ಪ್ರಿನ್ಸಿಪಾಲರನ್ನು ಬೆದರಿಸುವುದಕ್ಕಾಗಿ ಪತ್ರ ಬರೆದಿರುವಂತೆ ತೋರುತ್ತಿದೆ. ಈ ಕೃತ್ಯದಲ್ಲಿ ಐಸಿಸ್ ಪಾಲು ಸ್ವಲ್ಪವೂ ಇಲ್ಲವೆಂದು ನಹರ್ ದರ್ವಾಜಾ ಪೊಲೀಸ್ ಠಾಣೆಯ ಪ್ರಭಾರಿ ಆರ್. ಆರ್. ಗೌತಂ ಅಭಿಪ್ರಾಯಿಸಿದ್ದಾರೆ.
ನಾವು ಶಾಲೆಯ ಪ್ರತಿ ವಿದ್ಯಾರ್ಥಿ ಹಾಗೂ ಅಧ್ಯಾಪಕರ ಬರವಣಿಗೆಯ ಮಾದರಿಗಳನ್ನು ಪಡೆದುಕೊಳ್ಳುತ್ತಿದ್ದೇವೆ. ತನಿಖೆಗಾಗಿ ಉಸ್ಮಾನ್‌ನ ಬರಹದ ಮಾದರಿಯನ್ನೂ ಪಡೆದುಕೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಪೊಲೀಸರು ಕ್ರಿಮಿನಲ್ ಅಡ್ಡಿ ಹಾಗೂ ಸಾರ್ವಜನಿಕವಾಗಿ ಅಶ್ಲೀಲ ಪದಗಳ ಬಳಕೆಯ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಉಸ್ಮಾನ್ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾನೆ. ಯಾರೋ ತನ್ನ ಹೆಸರನ್ನು ದುರುಪಯೋಗಿಸುತ್ತಿದ್ದಾರೆಂದು ಆತ ಆರೋಪಿಸಿದ್ದಾನೆ.
ತನಗೆ ಆರ್ಥಿಕ ಬಿಕ್ಕಟ್ಟು ಇರುವುದರಿಂದ ಮಕ್ಕಳ ಈ ವರ್ಷದ ಶಾಲಾಶುಲ್ಕವನ್ನು ತಾನು ಕಟ್ಟಿಲ್ಲವೆಂಬುದು ಸತ್ಯ. ಆದರೆ ತನಗೆ ಪ್ರಿನ್ಸಿಪಾಲರೊಂದಿಗೆ ಯಾವುದೇ ಜಗಳವಿಲ್ಲ. ಶೀಘ್ರದಲ್ಲೇ ತಾನು ಶುಲ್ಕವನ್ನು ಪಾವತಿಸಲಿದ್ದೇನೆಂದು ಉಸ್ಮಾನ್ ಹೇಳಿದ್ದಾನೆ.