×
Ad

ಮೋದಿ ಸರಕಾರ ಬಹುಸಂಖ್ಯಾತರ ವಿರೋಧಿ: ಕನ್ಹಯ್ಯ ಕುಮಾರ್

Update: 2016-05-27 22:42 IST

 ‘‘ಎಲ್ಲರಿಗೆ ಲಾಲ್ ಸಲಾಂ ಹಾಗೂ ಜೈಭೀಮ್.’’

ಈ ಹಿಂದೆ ಮಾತನಾಡಿದ ಎಲ್ಲರೂ, ಭಾರತದ ಬಗೆಗಿನ ತಮ್ಮ ಯೋಚನೆ ಹಾಗೂ ದೃಷ್ಟಿಕೋನವನ್ನು ನಿಮ್ಮ ಮುಂದೆ ವಿಷದಪಡಿಸಿದ್ದಾರೆ. ಅವರು ಈಗಾಗಲೇ ಹೇಳಿದ್ದನ್ನು ನಾನು ಪುನರಾವರ್ತಿಸುವುದಿಲ್ಲ. ಆದರೆ ಅದಕ್ಕೆ ಒಂದಷ್ಟು ವಿಷಯ ಸೇರಿಸುತ್ತೇನೆ. ಮೊಟ್ಟಮೊದಲನೆಯದಾಗಿ, ವಿದ್ಯಾರ್ಥಿಗಳಾದ ನಾವು ಈ ಅವೇಶನದ ಅಧ್ಯಕ್ಷತೆ ವಹಿಸಿದ್ದೇವೆ. ಸಾಮಾನ್ಯವಾಗಿ ನಾವು ಡಯಾಸ್ ಎದುರು ಇರುತ್ತೇವೆ. ನಮ್ಮ ಮಾತು ಕೇಳಲು ಏಕೆ ಬಯಸಿದ್ದೀರಿ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಇವೆಲ್ಲಕ್ಕೂ ಮುನ್ನ ನಾನು ಉಮರ್ ಖಾಲಿದ್‌ರ ರಾಜಕೀಯ ಸಿದ್ಧಾಂತ ನನ್ನ ಸಿದ್ಧಾಂತಕ್ಕಿಂತ ಸಂಪೂರ್ಣ ಭಿನ್ನ ಎಂದು ಸ್ಪಷ್ಟಪಡಿಸಬಯಸುತ್ತೇನೆ. ಅವರ ಹಲವು ಅಭಿಪ್ರಾಯಗಳನ್ನು ನಾನು ಒಪ್ಪುವುದಿಲ್ಲ. ಆದರೆ ಒಂದು ವಿಚಾರದಲ್ಲಿ ನಾವು ಅವರನ್ನು ಒಪ್ಪುತ್ತೇನೆ. ನಾನು 2019ರ ಪ್ರಧಾನಿ ಅಭ್ಯರ್ಥಿ ಆಗಲಾರೆ ಎನ್ನುವುದು!
ಇತ್ತೀಚಿನ ವಿವಾದದಿಂದಾಗಿ ನಮಗೆ ರಾಷ್ಟ್ರವಿರೋಗಳು ಎಂಬ ಹಣೆಪಟ್ಟಿ ಕಟ್ಟಿದ್ದು ಮಾತ್ರವಲ್ಲದೇ, ಇಡೀ ವಿಶ್ವವಿದ್ಯಾನಿಲಯದ ಬಗ್ಗೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಲಾಗಿದೆ. ತೆರಿಗೆದಾರರ ಹಣವನ್ನು ನಮ್ಮ ಮೇಲೆ ವೆಚ್ಚ ಮಾಡಲಾಗುತ್ತಿದೆ ಹಾಗೂ ನಮ್ಮ ಪಿಎಚ್‌ಡಿಗಳು ಏಕೆ ಇಷ್ಟು ವಿಳಂಬವಾಗುತ್ತಿವೆ, ನಮಗೆ ಏಕೆ ಸಬ್ಸಿಡಿ ನೀಡಲಾಗುತ್ತಿದೆ ಎಂಬ ಪ್ರಶ್ನೆಗಳೂ ಎದ್ದಿವೆ. ಆದ್ದರಿಂದ ಇದೀಗ ನಮಗೆ ಶೈಕ್ಷಣಿಕ ಬದ್ಧತೆಗಿಂತ ಹೆಚ್ಚಾಗಿ ರಾಜಕೀಯ ಹೊಣೆಗಾರಿಕೆ ಅಕವಾಗಿದೆ ಎನ್ನಬೇಕು.

ದೇಶದಲ್ಲಿ ಪ್ರಮುಖವಾಗಿ ಎರಡು ಕವಲಿನ ಸಮರ ನಡೆಯುತ್ತಿದೆ. ಒಂದೆಡೆ, ಶಿಕ್ಷಣವನ್ನು ರಕ್ಷಿಸಬೇಕು ಹಾಗೂ ಇನ್ನೊಂದೆಡೆ ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸಬೇಕು. ಒಂದೆಡೆ, ದೇಶ ಹಾಗೂ ಸಂವಿಧಾನವನ್ನು ರಕ್ಷಿಸಬೇಕು; ಇನ್ನೊಂದೆಡೆ ಅದನ್ನು ಸಮಗ್ರ ರೂಪದಲ್ಲಿ ವಿಶ್ಲೇಷಿಸಬೇಕು. ಈ ಸಮರಕ್ಕೆ ಸುದೀರ್ಘ ಇತಿಹಾಸವಿದೆ. ಇಂದು ನಾವು ಅಂಬೇಡ್ಕರ್, ಗಾಂ, ಭಗತ್‌ಸಿಂಗ್, ಪೆರಿಯಾರ್, ುಲೆ, ಕಬೀರ್, ಗುರುನಾನಕ್ ಮುಂತಾದವರ ಹೆಸರನ್ನು ತೆಗೆದುಕೊಳ್ಳುವುದಾದರೆ, ಅದು ಏಕೆ ಪ್ರಮುಖ ಎನ್ನುವುದನ್ನೂ ನಾವು ತಿಳಿದುಕೊಳ್ಳಬೇಕಾಗುತ್ತದೆ. ನನ್ನ ತಿಳಿವಳಿಕೆಯ ಪ್ರಕಾರ, ಸ್ವಾತಂತ್ರ್ಯ ಗಳಿಸಿದ ವೇಳೆ ನಮ್ಮಲ್ಲಿ ಹಲವು ಕನಸುಗಳಿದ್ದವು. ಹಲವು ಆಕಾಂಕ್ಷೆಗಳನ್ನು ಸಾಸುವ ಸಲುವಾಗಿಯೇ ಹಲವು ಸಂಸ್ಥೆಗಳನ್ನು ಸೃಷ್ಟಿಸಲಾಯಿತು. ಆದರೆ ಈ ಕನಸುಗಳಿಗೆ ಇಂದು ಅಪಾಯ ಎದುರಾಗಿದೆ. ಉಮರ್ ಸರಿಯಾಗಿ ವಿವರಿಸಿದಂತೆ, ತಡೆ ಹಾಗೂ ಮುಂದುವರಿಕೆ ನಮ್ಮ ಕೈಗೆಟುಕುವಂತಿರಬೇಕು. ಸಮಗ್ರ ವೌಲ್ಯಮಾಪನದ ಬಳಿಕ, ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೇ ಇಂದು ಅಪಾಯ ಎದುರಾಗಿದೆ ಎಂಬ ನಿರ್ಧಾರಕ್ಕೆ ನಾನು ಬಂದಿದ್ದೇನೆ. ಸಮಾಜವಾದಿ ಪ್ರಜಾಪ್ರಭುತ್ವ ಕನ್ನಡಿಯ ಗಂಟಾಗಿಯೇ ಉಳಿದಿದೆ. ಬಂಡವಾಳಶಾಹಿ ತತ್ವ ಇಂದು ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿದೆ.
ಇತಿಹಾಸ ಮತ್ತೆ ಮರುಕಳಿ ಸುತ್ತದೆ. ಇಂಥದ್ದೇ ಪರಿಸ್ಥಿತಿ 20 ವರ್ಷಗಳ ಹಿಂದೆಯೂ ತಲೆದೋರಿತ್ತು. ಇದನ್ನು ಬಗೆಹರಿ ಸುವ ತಂತ್ರ ಕಂಡುಹಿಡಿಯುವಲ್ಲಿ ನಾವು ವಿಲರಾಗಿದ್ದೇವೆ.

ನಮ್ಮ ಆದ್ಯತೆಗಳನ್ನು ಸಮರ್ಪಕ ವಾಗಿ ಕಂಡುಕೊಳ್ಳುವುದು ನಮಗೆ ಸಾಧ್ಯವಾಗಿಲ್ಲ. ಯಾರ ವಿರುದ್ಧ ಮೊದಲು ಹೋರಾಡಬೇಕು ಮತ್ತು ಯಾರ ವಿರುದ್ಧ ಕೊನೆಗೆ ಹೋರಾಡಬೇಕು, ದೊಡ್ಡ ಶತ್ರು ಯಾರು, ಅಷ್ಟೊಂದು ದೈತ್ಯ ಶತ್ರುಗಳಲ್ಲದವರು ಯಾರು ಎಂಬ ಆದ್ಯತೆಯನ್ನು ನಾವು ಸಮರ್ಥವಾಗಿ ನಿರ್ಧರಿಸಿಲ್ಲ. ದೊಡ್ಡ ಶತ್ರುಗಳ ವಿರುದ್ಧ ಹೋರಾಡುವಾಗ ಸಾಮಾನ್ಯವಾಗಿ ನಾವು ಸಂಘಟಿತರಾಗಿಲ್ಲ. ಹಿಂದಿನ ವೈಲ್ಯಗಳಿಗೆ ಇದು ಮುಖ್ಯ ಕಾರಣ. ಒಂದು ಕೊಠಡಿಯ ಎಲ್ಲರೂ ಕೆಲ ಸಮಸ್ಯೆಗಳ ಬಗ್ಗೆ ಒಂದೇ ತೆರನಾಗಿ ಯೋಚಿಸುತ್ತಾರೆ. ಇಷ್ಟಾಗಿಯೂ ನಾವು ರಾಜಕೀಯವಾಗಿ ಭಿನ್ನರು. ನಾವು ಮಾರ್ಕ್ಸ್ ವಾದದ ಬಗೆಗಿನ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇವೆ. ಏಕೆಂದರೆ ದೇಶದಲ್ಲಿ 70 ಕಮ್ಯುನಿಸ್ಟ್ ಪಾರ್ಟಿಗಳಿವೆ. ಇದು ಸ್ಪಷ್ಟವಾಗಿ ವಿಶ್ಲೇಷಣೆ ಬೇರೆ; ಆದರೆ ಗುರಿ ಒಂದೇ ಎಂಬ ತತ್ವವನ್ನು ತೋರಿಸುತ್ತದೆ. ಆದ್ದರಿಂದ ಸಮಾನ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬದಿಗಿಟ್ಟು, ಒಗ್ಗೂಡಬೇಕು ಎನ್ನುವುದು ಸ್ಪಷ್ಟ.
ಕಳೆದ ವರ್ಷ ಇದೇ ಸಭಾಂಗಣದಲ್ಲಿ ಎ.ಬಿ.ಬರ್ಧನ್ ಮಾತನಾಡುತ್ತಾ, ‘‘ನಾವು ಎಡ ಎಂದು ಹೇಳಿದಾಗ ಅದು ಕಮ್ಯುನಿಸಂ ಎಂಬ ಅರ್ಥವಲ್ಲ. ಅಥವಾ ಕೆಂಪು ಧ್ವಜ ಹಿಡಿದ ಜನರು ಎಂಬ ಅರ್ಥವಷ್ಟೇ ಅಲ್ಲ. ಈ ದೇಶದ ಎಡಪಕ್ಷಗಳಲ್ಲಿ ಮೂರು ವಾಹಿನಿಗಳಿವೆ. ಸಾಮಾಜಿಕ ನ್ಯಾಯ, ಸಮಾಜವಾದ ಹಾಗೂ ಕಮ್ಯುನಿಸಂ. ಈ ಮೂರೂ ವರ್ಗ ಸೇರಿ ಭಾರತೀಯ ಎಡಪಕ್ಷಗಳಾಗುತ್ತವೆ. ನಾವು ಎಡ ಪ್ರಜಾಪ್ರಭುತ್ವ ಮತ್ತು ಎಡ ಪ್ರಗತಿಪರ ಎಂಬ ಪದವನ್ನು ಬಳಸಿದರೆ, ಬಿಜೆಪಿಯನ್ನು ತಡೆಯುವ ಎಲ್ಲ ಪಕ್ಷಗಳು ಎಡಪಕ್ಷಗಳ ಛತ್ರಿಯಡಿ ಬರುತ್ತವೆ ಎಂದು ಹೇಳುವುದು ಹೆಚ್ಚು ಸುರಕ್ಷಿತ. ಅಂಥ ಒಂದು ಏಕತೆ ಹಾಗೂ ರಾಜಕೀಯ ಕೂಟ ರಚಿಸಿಕೊಳ್ಳದಿದ್ದರೆ, ನಮ್ಮ ಕನಸುಗಳು ಕನಸುಗಳಾಗಿಯೇ ಉಳಿಯುತ್ತವೆ.’’

ಇಂದು ದೇಶದಲ್ಲಿ ಮೂಲಭೂತವಾಗಿ ಕೇಳಿಬರುತ್ತಿರುವ ಒಂದು ಪ್ರಶ್ನೆ ಎಂದರೆ, ದೇಶದ ಶಿಕ್ಷಣ ವ್ಯವಸ್ಥೆಯನ್ನು ಉಳಿಸುವುದು ಹೇಗೆ ಎನ್ನುವುದು. ಶಿಕ್ಷಣದ ಮೇಲೆ ದಾಳಿ ನಡೆಯುತ್ತಿರುವುದು ಹೊಸದೇನೂ ಅಲ್ಲ. ಆದರೆ ದೊಡ್ಡ ಪ್ರಶ್ನೆ ಎಂದರೆ, ಹಿಂದೆ ಈ ಬಗ್ಗೆ ಎಲ್ಲರೂ ಏಕೆ ನಿಷ್ಕ್ರಿಯರಾಗಿದ್ದರು ಎನ್ನುವುದು? ಸ್ವಯಂಘೋಷಿತ ಕಮ್ಯುನಿಸ್ಟ್, ಪ್ರಗತಿಪರ, ಪ್ರಜಾಪ್ರಭುತ್ವ ಪರ ಶಕ್ತಿಗಳು ಏಕೆ ವೌನವಾಗಿದ್ದವು? ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತಲು ಸರಸ್ವತಿ ಶಿಶುಮಂದಿರದಂಥ ಸಂಸ್ಥೆಗಳನ್ನು ತೆರೆದಾಗ, ವೈಜ್ಞಾನಿಕ ಮನೋಭಾವದ ಪ್ರತಿಪಾದಕರು ಎಲ್ಲಿ ಹೋಗಿದ್ದರು?
ಈ ಹಿಂದೆ ಯಾವಾಗ ಕೂಡಾ ರಾಜಕೀಯ ಪಕ್ಷಗಳು ಶಿಕ್ಷಣಕ್ಕೆ ಒತ್ತು ನೀಡಿರಲಿಲ್ಲ. 1986ರಲ್ಲಿ, ಶಿಕ್ಷಣ ನೀತಿ ಜಾರಿಗೆ ಬಂತು. ಮೂರು ಪ್ರಮುಖ ವಿಶ್ವವಿದ್ಯಾನಿಲಯಗಳ ಪೈಕಿ ಒಂದು ವಿಶ್ವವಿದ್ಯಾನಿಲಯದ ಕುಲಪತಿ, ‘ಬಿಹಾರ್ ಮೇ ದಾತೆ ವಿಶ್ವವಿದ್ಯಾಲಯ’ ಎಂಬ ಕೃತಿ ರಚಿಸಿದರು. 1980ರ ದಶಕದಲ್ಲಿ, ಸರಕಾರಿ ವಿಶ್ವವಿದ್ಯಾನಿಲಯಗಳನ್ನು ನಾಶಪಡಿಸುವ ಹುನ್ನಾರ ನಡೆಯಿತು. ಈ ಬಗ್ಗೆ ಕೇಂದ್ರೀಯ ವಿಶ್ವವಿದ್ಯಾನಿಲಯದ ಬುದ್ಧಿಜೀವಿಗಳು ಮತ್ತು ಪ್ರಾಜ್ಞರು ಗಮನ ಹರಿಸಲಿಲ್ಲ. ಸರಕಾರಿ ವಿಶ್ವವಿದ್ಯಾನಿಲಯಗಳಿಗೆ ಏನಾಗುತ್ತಿದೆ ಎಂಬ ಬಗ್ಗೆ ಯಾರೂ ಚಿಂತಿಸಲಿಲ್ಲ. ಮುಂದೆ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೂ ಇದೇ ಪರಿಸ್ಥಿತಿ ಬರಬಹುದೇ? ಎಂಬ ಬಗ್ಗೆ ಯಾರಿಗೂ ಸಂದೇಹ ಬರಲಿಲ್ಲ. ನಿಧಾನವಾಗಿ ಹಾಗೂ ಕ್ರಮೇಣ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡವಲಾಗುತ್ತಿದೆ. ಶಿಕ್ಷಣವನ್ನೇ ಗುರಿ ಮಾಡಿರುವ ಪ್ರಮುಖ ಕಾರಣವೆಂದರೆ, ಅದರ ಮೂಲಕ ಜನಸಾಮಾನ್ಯರು ಇಡೀ ದೇಶವನ್ನು ಅರ್ಥ ಮಾಡಿಕೊಳ್ಳುತ್ತಾರೆ.
ಭಾರತದ ಬಗೆಗಿನ ಕಲ್ಪನೆಯನ್ನು ಅರ್ಥಮಾಡಿ ಕೊಳ್ಳಬೇಕಾದರೆ, ನಾವು ಹಲವು ಮೂಲಭೂತ ಅಂಶಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸರಕಾರ, ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆಯನ್ನು ಬೋಸುತ್ತಿದೆ. ಇದೇ ವೇಳೆ ರಕ್ಷಣಾ ಒಪ್ಪಂದಗಳ ಮೇಲೆ 6,000 ಕೋಟಿ ರೂಪಾಯಿ ವೆಚ್ಚ ಮಾಡುತ್ತದೆ. ಯಾರ ವಿರುದ್ಧ ನೀವು ಯುದ್ಧ ಮಾಡಬಯಸುತ್ತೀರಿ? ವಿಶ್ವದ ವಿರುದ್ಧ ಹೋರಾಡಿ ಸೂಪರ್ ಪವರ್ ಆಗುವ ಕಲ್ಪನೆ ಸತ್ಯವೇ ಅಥವಾ ವಸುದೈವ ಕುಟುಂಬಕಂ ಎಂಬ ನಂಬಿಕೆ ಸತ್ಯವೇ? ನನ್ನ ಸ್ಪಷ್ಟ ಅಭಿಪ್ರಾಯದ ಪ್ರಕಾರ, ವಸುದೈವ ಕುಟುಂಬಕಂ ಎನ್ನುವುದೇ ವಾಸ್ತವ ಸತ್ಯ. ಇನ್ನೊಂದು ಮಿಥ್ಯ. ಈ ಸುಳ್ಳನ್ನು ಬಹಿರಂಗಗೊಳಿಸಲು ಒಂದು ಸರಳ ವಾದವಷ್ಟೇ ಸಾಕು. ಎನ್‌ಇಟಿಯೇತರ ೆಲೋಶಿಪ್‌ಗೆ ನಿಮ್ಮಲ್ಲಿ 99 ಕೋಟಿ ರೂ. ಇಲ್ಲ; ಆದರೆ ಯುದ್ಧಗಳಿಗಾಗಿ 6,000 ಕೋಟಿ ರೂ. ಇದೆ. ಈ ಸಿದ್ಧಾಂತವನ್ನು ನಾನು ತಿರಸ್ಕರಿಸುತ್ತೇನೆ.

ದೇಶದ ಜನರ ಹಸಿವು ಇಂಗಿಸಲು ಈ 6 ಸಾವಿರ ಕೋಟಿ ಸಾಲದು ಎನ್ನುವುದು ನನ್ನ ನಂಬಿಕೆ. ಹೀಗೆ ವೆಚ್ಚ ಮಾಡುವುದು ವೌಲ್ಯಯುತ ಕೂಡಾ ಅಲ್ಲ. ಇದು ಕೇವಲ ಇಂದಿನ ಶಿಕ್ಷಣದ ಪರಿಸ್ಥಿತಿಯಷ್ಟೇ ಅಲ್ಲ. ಉನ್ನತ ಶಿಕ್ಷಣ ಪಡೆದ ಶೇಕಡ 3ರಷ್ಟು ಮಂದಿ ಶಿಕ್ಷಣದ ಬಳಿಕ ಉದ್ಯೋಗ ಪಡೆಯುವುದಿಲ್ಲ. ನನ್ನ ಸ್ವಂತ ಉದಾಹರಣೆಯನ್ನೇ ಹೇಳುತ್ತೇನೆ. ನಾನು ಜೆಎನ್‌ಯುಗೆ ಸೇರಿದ ಬಳಿಕ, ನನ್ನ ಬದುಕಿಗೆ ನೆಲೆ ಕಂಡುಕೊಂಡೆ ಎಂಬ ಭಾವನೆ ಮೂಡಿತು. ನಾನೀಗ ಮಾಡುವಂಥದ್ದು ಹೆಚ್ಚೇನೂ ಇಲ್ಲ ಎಂಬ ನಂಬಿಕೆ ಬಂತು. ಆದರೆ ನನ್ನ ಪಿಎಚ್‌ಡಿ ಪದವಿ ಪೂರ್ಣಗೊಳಿಸಿದ ಬಳಿಕ, ನಾನು ಒಳ್ಳೆಯ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಬೇಕು. ಆದರೆ ಇಂದಿನ ಪರಿಸ್ಥಿತಿಯನ್ನು ನೋಡಿ. ಖಾಯಂ ಉದ್ಯೋಗದ ವಿಚಾರ ಹಾಗಿರಲಿ; ತಾತ್ಕಾಲಿಕವಾಗಿ ಉದ್ಯೋಗ ನೀಡುವ ಸ್ಥಿತಿಯಲ್ಲೂ ದಿಲ್ಲಿ ವಿಶ್ವವಿದ್ಯಾನಿಲಯ ಇಲ್ಲ. ಶಿಕ್ಷಣ ಹಾಗೂ ಉದ್ಯೋಗವನ್ನು ನಾವು ಸಮಾನವಾಗಿ ಪರಿಗಣಿಸಬೇಕು. ಇದು ಖಂಡಿತವಾಗಿಯೂ ರಾಷ್ಟ್ರೀಯತೆಯ ವಿರೋಧದ ವಿಚಾರವಲ್ಲ ಹಾಗೂ ಸಂವಿಧಾನಬಾಹಿರವಂತೂ ಅಲ್ಲವೇ ಅಲ್ಲ.

ಅಂಬೇಡ್ಕರ್ ಸಂವಿಧಾನವನ್ನು ಬರೆದಾಗ, ಅವರು ಒಂದು ಚಿಂತನೆಯನ್ನು ಪ್ರತಿಪಾದಿಸಿದರು. ರಸ್ತೆ ಬದಿಯಲ್ಲಿ ಅಂಬಾನಿಯ ಮಗ ಹಾಗೂ ಬೂಟು ಹೊಲಿಯುವವನ ಮಗ ಕೂಡಾ ಸಮಾನರು. ಹಾಗೆ ಇಲ್ಲದಿದ್ದರೆ, ಅವರನ್ನು ಸಮಾನರನ್ನಾಗಿ ಮಾಡಬೇಕು. ಒಂದೋ ಬೀದಿಬದಿ ಮಗುವನ್ನು ಅಂಬಾನಿ ಮಗುವಿನ ಶಾಲೆಗೆ ಕಳುಹಿಸಬೇಕು ಅಥವಾ ಅಂಬಾನಿ ಮಗನನ್ನು ಸಣ್ಣ ಶಾಲೆಗೆ ಕರೆ ತರಬೇಕು. ನಮ್ಮಲ್ಲಿ ಸರಳ ರಾಜಕೀಯ ದೃಷ್ಟಿಕೋನವಿದೆ. ಎಲ್ಲರಿಗೂ ರಸಗುಲ್ಲ ನೀಡಬೇಕು ಅಥವಾ ಎಲ್ಲರಿಗೂ ಸುಕ್ಕಾ ರೊಟ್ಟಿ ನೀಡಬೇಕು. ಕೇಂದ್ರ ಬಜೆಟನ್ನು ನಾವು ಪರಿಶೀಲಿಸುವ ಅಗತ್ಯವಿದೆ. ರಕ್ಷಣಾ ವೆಚ್ಚದ ಶೇಕಡ 3ನ್ನು ಶಿಕ್ಷಣಕ್ಕೆ ವಿನಿಯೋಗಿಸಿದರೆ, ಶಿಕ್ಷಣ, ದೇಶದ ಒಟ್ಟು ಜಿಡಿಪಿಯ ಶೇಕಡ 6ರಷ್ಟು ಕೊಡುಗೆ ನೀಡಬಲ್ಲದು. ಆ ದಿನ ಎಲ್ಲರೂ ಸುಶಿಕ್ಷಿತರಾಗುತ್ತಾರೆ. ಹೀಗೆ ಭಾರತದ ಯೋಚನೆ ಏನು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಭಾರತದ ಬಗೆಗಿನ ಯೋಚನೆಯನ್ನು ಕೇವಲ ಉಳ್ಳವರು ಮಾಡಬಾರದು ಅಥವಾ ಅವರಿಂದ ನಿರ್ಧರಿತವಾಗಬಾರದು. ಇದು ಬಡವರು, ಗ್ರಾಮಸ್ಥರು ಹಾಗೂ ಹಳ್ಳಿಗಳ ಮುಖಂಡರಿಂದ ನಿರ್ಧರಿತವಾಗಬೇಕು. ಯಾರಿಗೆ ವಿದ್ಯುತ್ ಇಲ್ಲದಿದ್ದರೂ, ಸೇವಿಸಲು ಕೋಕಾ ಕೋಲಾ ಲಭ್ಯತೆ ಇದೆಯೋ ಅವರು ನಿರ್ಧರಿಸಬೇಕು.

ಅಂತಿಮವಾಗಿ, ವಿದ್ಯಾರ್ಥಿಗಳ ಮೇಲೆ ಏಕೆ ಈ ದಾಳಿ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶದ ಒಂದು ಹಳೆಯ ಸಂಪ್ರದಾಯ ನಿಮಗೆಲ್ಲರಿಗೆ ತಿಳಿದಿರಬೇಕು. ಒಬ್ಬ ಮಹಿಳೆ ವಿಧವೆಯಾದಾಗ, ಆಕೆಯ ಜನ್ಮದತ್ತ ಸಂಪತ್ತನ್ನು ಕೊಳ್ಳೆ ಹೊಡೆಯಲು ಇಡೀ ಸಮಾಜ ಮುಂದಾಗುತ್ತದೆ. ಆಕೆ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೆ, ಆಕೆಗೆ ಮಾಟಗಾತಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಆಕೆಯ ಬಗ್ಗೆ ಯಾರಿಗೂ ಆಗ ಕನಿಕರ ಇರುವುದಿಲ್ಲ. ಇಂಥದ್ದೇ ಪರಿಸ್ಥಿತಿ ಜೆಎನ್‌ಯುಗೆ ಕೂಡಾ ಬಂದೊದಗಿದೆ. ವಿಶ್ವವಿದ್ಯಾನಿಲಯದ ಬಗ್ಗೆ ಜನರಲ್ಲಿ ವಿರುದ್ಧವಾದ ಭಾವನೆ ಮೂಡಿಸಲಾಗಿದೆ. ಆ ಮೂಲಕ ನಡೆಯುತ್ತಿರುವ ಹೋರಾಟವನ್ನು ಅಮಾನ್ಯಗೊಳಿಸಲಾಗುತ್ತಿದೆ. ಜತೆಗೆ ಇಂಥ ವಿಷಯಗಳಲ್ಲಿ ಜನರು ಸಂಪರ್ಕ ಸಾಸದಂತೆ ತಡೆಯುವ ಪ್ರಯತ್ನ ನಡೆದಿದೆ.
ಒಮ್ಮೆ ಒಬ್ಬ ಜನರಲ್ ಹಾಡು ಕೇಳುತ್ತಿದ್ದ. ತಕ್ಷಣ ಕ್ರುದ್ಧರಾಗಿ ಕವಿಯನ್ನು ಕರೆದ. ಕವಿಯನ್ನು ಪ್ರಶ್ನಿಸಿದಾಗ, ಸಮಾಜದ ಕಟು ವಾಸ್ತವತೆಗೆ ಹಿಡಿದ ಕನ್ನಡಿ ಇದು ಎಂದು ಕವಿ ಸಮರ್ಥಿಸಿಕೊಂಡರು. ಇದಕ್ಕಾಗಿ ನಿನ್ನನ್ನು ಹತ್ಯೆ ಮಾಡಲಾಗುತ್ತದೆ ಎಂದು ಜನರಲ್ ಅಬ್ಬರಿಸಿದ. ಏಕೆಂದರೆ ನಿಮ್ಮ ಯೋಚನೆಗಳಿಂದ ನನಗೆ ಕೂಡಾ ಮನವರಿಕೆಯಾಗಿದೆ ಎಂದು ಹೇಳಿದ. ಇದು ನಮ್ಮ ದೇಶದ ಇಂದಿನ ಸ್ಥಿತಿಗತಿ. ಇಡೀ ಪ್ರಮುಖ ಮತ ಮೂಲಕ್ಕೇ ನಮ್ಮ ಯೋಚನೆಗಳು ಮನದಟ್ಟಾಗಿವೆ. ಅದ್ದರಿಂದ ಆರೆಸ್ಸೆಸ್ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ವಿರೋ ಎಂದು ನಾನು ಹೇಳುವುದಿಲ್ಲ. ಇವೆರಡೂ ಬಹುಸಂಖ್ಯಾತರಿಗೆ ವಿರೋಗಳು. ಈ ದೇಶದ ಬಹುಸಂಖ್ಯಾತರು ಎಂದರೆ ಬಡವರು ಹಾಗೂ ಹಿಂದುಳಿದ ಜನ. ಧಾರ್ಮಿಕವಾಗಿ ಸರಕಾರ ಅಲ್ಪಸಂಖ್ಯಾತ ವಿರೋ. ಆದರೆ ಆರ್ಥಿಕತೆ ವಿಚಾರಕ್ಕೆ ಬಂದರೆ, ಬಹುಸಂಖ್ಯಾತರ ವಿರೋ. ಬಹುಜನ ವಿರೋ ಸರಕಾರದ ನಿಜ ಬಣ್ಣವನ್ನು ಈಗಲಾದರೂ ಬಯಲುಗೊಳಿಸದಿದ್ದರೆ, ಅದು ಅಕಾರಕ್ಕೆ ಬರುತ್ತಲೇ ಇರುತ್ತದೆ. ನಾವು ಅದನ್ನು ಮಾಡಿದರೆ, ಖಂಡಿತವಾಗಿಯೂ ಸರಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಅಲ್ಪಮತದ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
(ಇದರ ಭಾಷಾಂತರ ಹಾಗೂ ಸಂಪಾದನೆ ಹೊಣೆ ಕುಮಾರ್ ಸತ್ಯಂ ಅವರಿಗೆ ಸೇರಿದ್ದು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News