×
Ad

ಬಿಎಂಟಿಸಿ ಬಸ್ಸುಗಳು ಜನಪರವಾಗಲಿ

Update: 2016-05-27 23:09 IST

ಮಾನ್ಯರೆ,
ಜನಸಂಪರ್ಕ ಸಾರಿಗೆ ಬಿಎಂಟಿಸಿಯಿಂದಾಗಿ ಬೆಂಗಳೂರಿನಲ್ಲಿರುವ ಜನತೆ ಅನುಭವಿಸುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಇಲ್ಲಿ ಖಾಸಗಿ ಬಸ್ಸುಗಳ ಸೇವೆ ಇಲ್ಲದಿರುವುದರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಜನ ಸರಕಾರಿ ಬಸ್ಸುಗಳನ್ನೇ ಅವಲಂಬಿಸಬೇಕಾಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ನಿಮಿಷಕ್ಕೊಂದು ಬಸ್ಸು ಬರುತ್ತಿದ್ದರೆ ಗ್ರಾಮೀಣ ಭಾಗದಲ್ಲಿ ಬಸ್ಸಿಗಾಗಿ ಒಂದು ತಾಸು ಕಾಯಬೇಕಾದ ದುಸ್ಥಿತಿ ಇಲ್ಲಿದೆ.

ನಿರ್ವಾಹಕರಲ್ಲಿ ಏನು ತಡವಾಯಿತು ಎಂದು ಕೇಳಿದರೆ ‘ಟ್ರಾಫಿಕ್ ಸಮಸ್ಯೆ’ ಎಂಬ ಉತ್ತರ ಕೂಡಲೇ ಬರುತ್ತದೆ. ಅಲ್ಲದೆ ಟಿಕೆಟ್ ಕೊಟ್ಟರೂ ಚಿಲ್ಲರೆ ಕೊಡದೆ ವಂಚಿಸುವ ನಿರ್ವಾಹಕರೂ ಈ ಬಸ್ಸುಗಳಲ್ಲಿದ್ದಾರೆ. ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ಈ ಅನುಭವ ಪ್ರತಿನಿತ್ಯ ಆಗುತ್ತದೆ. ನಿರ್ವಾಹಕರು ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡುವಾಗ ಅದರ ಹಿಂಬದಿಯಲ್ಲಿ ಬಾಕಿ ಮೊತ್ತವನ್ನು ನೋಟ್ ಮಾಡಿ ಪಡೆದುಕೊಳ್ಳಲು ಹೇಳುತ್ತಾರೆ. ಆದರೆ ತಮ್ಮ ಸ್ಟಾಪ್ ಬಂದೊಡನೆ ಗಡಿಬಿಡಿಯಲ್ಲಿ ಇಳಿಯುವ ಪ್ರಯಾಣಿಕರಿಗೆ ಚಿಲ್ಲರೆ ಕೇಳುವಷ್ಟು ವ್ಯವಧಾನವೂ ಇರುವುದಿಲ್ಲ. ಅಲ್ಲದೆ ಚಿಲ್ಲರೆ ಕೇಳಲು ಮರೆತುಬಿಡುವ ಸಾಕಷ್ಟು ಮಂದಿ ಪ್ರಯಾಣಿಕರನ್ನು ನೋಡಬಹುದು. ಸೀಟಿಗಾಗಿ ಪರದಾಟ, ಅನ್ಯಭಾಷಿಕರ ಮಧ್ಯೆ ವಾಕ್ಸಮರ, ಚಿಲ್ಲರೆ ಕೊಡಲಿಲ್ಲ ಎಂಬ ಕಾರಣಕ್ಕೆ ಬಲಪ್ರದರ್ಶನ, ಸಿಗ್ನಲ್ ಅಲ್ಲದ ಸ್ಥಳದಲ್ಲಿ ಸ್ಟಾಪ್ ಕೊಡಲಿಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಮತ್ತು ಪ್ರಯಾಣಿಕನ ಮಧ್ಯೆ ಅವಾಚ್ಯ ಶಬ್ದಗಳ ಜಗಳ ಇವೆಲ್ಲ ಬಿಎಂಟಿಸಿ ಬಸ್ಸುಗಳಲ್ಲಿ ನಾವು ದಿನನಿತ್ಯ ಕಾಣುವ ದೃಶ್ಯಗಳು. ಅಲ್ಲದೆ ಬಸ್ಸುಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಹಾಕುವ ಅಗತ್ಯ ಇನ್ನೂ ಸರಕಾರದ ಗಮನಕ್ಕೆ ಬಂದಂತಿಲ್ಲ. ಮಹಿಳೆಯರ ಸೀಟಲ್ಲಿ ಕೂರಬಾರದು ಎಂದು ಗೊತ್ತಿದ್ದರೂ ಅರಿವಿಲ್ಲದ ಹಾಗೆ ನಡೆದುಕೊಳ್ಳುವ ಪುರುಷರೇನೂ ಕಮ್ಮಿ ಇಲ್ಲ. ಹೀಗೆ ಬಿಎಂಟಿಸಿ ಬಸ್ಸುಗಳ ಪ್ರಯಾಣಿಕರು ಹತ್ತಾರು ಸಮಸ್ಯೆಗಳ ಮಧ್ಯೆ ಪ್ರಯಾಣಿಸುವುದು ಸಾಮಾನ್ಯವಾಗಿಬಿಟ್ಟಿವೆ. ಆದ್ದರಿಂದ ಇನ್ನಾದರೂ ಇದಕ್ಕೆಲ್ಲ ಕಡಿವಾಣ ಹಾಕಲು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ. 

Writer - ರಿಯಾಝ್ ಜಿ. ಉಜಿರೆ

contributor

Editor - ರಿಯಾಝ್ ಜಿ. ಉಜಿರೆ

contributor

Similar News