1200 ಬೆಳಕಿನ ವರ್ಷ ದೂರದಲ್ಲಿ ವಾಸಯೋಗ್ಯ ಗ್ರಹ ಪತ್ತೆ
ವಾಶಿಂಗ್ಟನ್, ಮೇ 28: ಭೂಮಿಯಿಂದ 1200 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಗ್ರಹದ ಮೇಲ್ಮೈಯಲ್ಲಿ ದ್ರವರೂಪದ ನೀರಿನ ಅಸ್ತಿತ್ವವಿರುವುದು ಪತ್ತೆಯಾಗಿದ್ದು, ಅಲ್ಲಿ ಜೀವಿಗಳ ವಾಸಕ್ಕೆ ಯೋಗ್ಯವಾದ ವಾತಾವರಣವಿದೆಯೆಂದು ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ವರದಿಯೊಂದು ತಿಳಿಸಿದೆ.
ಕೆಪ್ಲೆರ್-62ಎಫ್ ಎಂದು ಹೆಸರಿಸಲಾದ ಈ ಗ್ರಹವು ಲಿರಾ ತಾರಾಗುಚ್ಛದ ದಿಕ್ಕಿನಲ್ಲಿದ್ದು, ಭೂಮಿಗೆ ಶೇ.40ರಷ್ಟು ದೊಡ್ಡದಿದೆ. ‘ ಕೆಪ್ಲರ್ ಗಾತ್ರವನ್ನು ಗಮನಿಸಿದಾಗ ಅದು ಪ್ರಾಯಶಃ ಬಂಡೆಗಲ್ಲುಗಳಿಂದ ಆವೃತವಾಗಿರಬೇಕು ಹಾಗೂ ಸಮುದ್ರಗಳನ್ನು ಹೊಂದಿರಬಹುದು ಎಂದು ಅಧ್ಯಯನ ವರದಿಯ ಮುಖ್ಯ ರಚನಕಾರ ಅಮೊವಾ ಶೀಲ್ಡ್ಸ್ ತಿಳಿಸಿದ್ದಾರೆ. ನಾಸಾದ ಕೆಪ್ಲೆರ್ ಬಾಹ್ಯಾಕಾಶ ಟೆಲಿಸ್ಕೋಪ್ ನೌಕೆಯು, 2013ರಲ್ಲಿ ಕೆಪ್ಲೆರ್-62 ಎಫ್ ಗ್ರಹವನ್ನು ಪತ್ತೆ ಹಚ್ಚಿತ್ತು.ಈ ಗ್ರಹವು ಇತರ ಐದು ಗ್ರಹಗಳೊಂದಿಗೆ ಸೂರ್ಯನಿಗಿಂತ ಸಣ್ಣದಾದ ಹಾಗೂ ತಂಪಾಗಿರುವ ನಕ್ಷತ್ರವೊಂದನ್ನು ಪರಿಭ್ರಮಿಸುತ್ತಿದೆ. ಆದರೆ ಈ ಗ್ರಹದ ವಾತಾವರಣ ಸಂಯೋಜನೆ ಮತ್ತಿತರ ವಿವರಗಳ ಬಗ್ಗೆ ಅಧ್ಯಯನ ವರದಿಯಲ್ಲಿ ಯಾವುದೇ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.