ರಘುರಾಮ್ ರಾಜನ್ ರನ್ನು ಪಡೆಯುವ ಅರ್ಹತೆ ಈ ಸರ್ಕಾರಕ್ಕೆ ಇಲ್ಲ

Update: 2016-05-29 03:00 GMT

ಹೊಸದಿಲ್ಲಿ, ಮೇ 29: ರಘುರಾಮ್ ರಾಜನ್ ಅವರಂಥ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞರನ್ನು ಹೊಂದುವ ಅರ್ಹತೆ ಮೋದಿ ಸರ್ಕಾರಕ್ಕೆ ಇದೆಯೇ ಎಂದು ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ರಾಜನ್ ವಿರುದ್ಧ ಅಪಸ್ವರ ಎತ್ತಿರುವ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಅವರನ್ನು ನಿರ್ಲಕ್ಷಿಸಿದರು.

ರಾಜನ್ ಅವರನ್ನು ಎರಡನೇ ಅವಧಿಗೆ ಮುಂದುವರಿಸಬೇಕೇ ಎಂದು ಕೇಳಿದ ಪ್ರಶ್ನೆಗೆ, "ಇಂಥ ಅರ್ಥಶಾಸ್ತ್ರಜ್ಞರನ್ನು ಹೊಂದುವ ಅರ್ಹತೆ ಈ ಸರ್ಕಾರಕ್ಕಿದೆಯೇ ಎಂಬ ಅನುಮಾನ ನನ್ನಲ್ಲಿ ಮೂಡುತ್ತಿದೆ" ಎಂದು ಚಿದಂಬರಂ ಹೇಳಿದರು.

ರಾಜನ್ ಅವರ ಮೂರು ವರ್ಷಗಳ ಅಧಿಕಾರಾವಧಿ ಸೆಪ್ಟೆಂಬರ್ ಮೊದಲ ವಾರ ಕೊನೆಗೊಳ್ಳಲಿದೆ.

ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಮೋದಿ ಸರ್ಕಾರದ ಎರಡು ವರ್ಷದ ಸಾಧನೆಗಳ ಬಗ್ಗೆ ವರದಿಗಾರರ ಜತೆ ಚಿದಂಬರಂ ಸಂವಾದ ನಡೆಸಿದರು. ರಾಜನ್ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ಸುಬ್ರಹ್ಮಣ್ಯನ್‌ ಸ್ವಾಮಿ ಬಗ್ಗೆ ಪ್ರಶ್ನಿಸಿದಾಗ, "ಇದನ್ನು ನಾವು ನಿರ್ಲಕ್ಷಿಸುತ್ತೇವೆ. ಪ್ರಧಾನಿ ಅಥವಾ ಹಣಕಾಸು ಸಚಿವರು ರಾಜನ್ ವಿರುದ್ಧ ಮಾತನಾಡಿದರೆ ಮಾತ್ರ ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.

ರಾಜನ್ ಅವರ ನಿರ್ಧಾರಗಳನ್ನು ಸಮರ್ಥಿಸಿಕೊಂಡ ಚಿದಂಬರಂ, ಯುಪಿಎ ಸರ್ಕಾರ, ವಿಶ್ವದ ಅತ್ಯುನ್ನತ ಅರ್ಥಶಾಸ್ತ್ರಜ್ಞರಲ್ಲೊಬ್ಬರಾದ ರಾಜನ್ ಅವರನ್ನು ನೇಮಕ ಮಾಡಿದೆ. ನಮಗೆ ಅವರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ" ಎಂದು ಸ್ಪಷ್ಟಪಡಿಸಿದರು.

ಎರಡು ದಿನಗಳ ಹಿಂದೆ ಸುಬ್ರಹ್ಮಣ್ಯನ್ ಸ್ವಾಮಿ, ಪ್ರಧಾನಿಗೆ ಪತ್ರ ಬರೆದು, ರಾಜನ್ ಅವರನ್ನು ಎರಡನೇ ಅವಧಿಗೆ ಮುಂದುವರಿಸದಂತೆ ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News