ಮೂವರಿಗೆ 'ಜೀವ ಕೊಟ್ಟು' ಪ್ರಾಣ ಬಿಟ್ಟವಳಿಗೆ ಹತ್ತನೇ ತರಗತಿಯಲ್ಲಿ 8.6 ಗ್ರೇಡ್
ಮುಂಬೈ, ಮೇ 29: ಸಿಬಿಎಸ್‌ಇ ಬೋರ್ಡ್‌ನ 10ನೇ ತರಗತಿ ಪರೀಕ್ಷೆಯಲ್ಲಿ 8.6 ಕ್ರೋಢೀಕೃತ ಗ್ರೇಡ್ ಪಾಯಿಂಟ್ ಸರಾಸರಿ (ಸಿಜಿಪಿಎ) ಗಳಿಸಿರುವುದು ಹಲವು ವಿದ್ಯಾರ್ಥಿಗಳ ಪೋಷಕರ ಮುಖದಲ್ಲಿ ನಗೆ ಅರಳಿಸಬಹುದು. ಆದರೆ ದುರದೃಷ್ಟವಶಾತ್, ಥಾಣೆಯ ಈ ಸಂತ್ರಸ್ತ ಕುಟುಂಬಕ್ಕೆ ಆ ಭಾಗ್ಯ ಇಲ್ಲ. ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮಗಳು ಕಳೆದ ತಿಂಗಳು ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಳು!
ಕೆಜಾಲ್ ಪಾಂಡೆ (16) ಎಂಬ ಬಾಲಕಿ ತಾಯಿಯನ್ನು ಹಿಂದೆ ಕೂರಿಸಿಕೊಂಡು ದ್ವಿಚಕ್ರವಾಹನ ಚಲಾಯಿಸುತ್ತಿದ್ದಳು. ಒಂದು ಕಾರು ಇವರನ್ನು ಹಿಂದಿಕ್ಕುವ ಭರದಲ್ಲಿ, ಇವರ ವಾಹನಕ್ಕೆ ಢಿಕ್ಕಿ ಹೊಡೆಯಿತು. ಬಾಲಕಿಯ ಮೆದುಳಿಗೆ ತೀವ್ರ ಗಾಯವಾಯಿತು. ಮೆದುಳು ನಿಷ್ಕ್ರಿಯವಾಯಿತು.
ಈ ಅಪಘಾತದಿಂದ ಕೆಜಾಲ್ ಕುಟುಂಬ ಆಘಾತಕ್ಕೊಳಗಾದರೂ, ಆಕೆಯ ಮೂತ್ರಪಿಂಡ ಹಾಗೂ ಲಿವರ್ ದಾನ ಮಾಡಲು ಕುಟುಂಬ ನಿರ್ಧರಿಸಿತು. ಒಬ್ಬ 14 ವರ್ಷದ ಬಾಲಕ ಸೇರಿದಂತೆ ಮೂವರಿಗೆ ಈಕೆಯ ಲಿವರ್ ದಾನ ಮಾಡಲು ನಿರ್ಧರಿಸಿದರು. "ಆಕೆ ಇಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಆದರೆ ಆಕೆಯ ಅಂಗಾಂಗ ದಾನ ಮಾಡಿದ್ದರಿಂದ ಆಕೆ ಇನ್ನೂ ಜೀವಂತ ಇದ್ದಾಳೆ ಎಂಬ ಕಲ್ಪನೆ ನಮ್ಮಲ್ಲಿದೆ. ಆಕೆಯ ಫಲಿತಾಂಶ ವೀಕ್ಷಿಸುವ ಭಾಗ್ಯ ನಮಗಿಲ್ಲ" ಎಂದು ತಂದೆ ಶ್ಯಾಮಕಾಂತ್ ಪಾಂಡೆ ಹೇಳಿದ್ದಾರೆ.
ಅಕ್ಕನ ಸಾವಿನಿಂದ ಆಘಾತಕ್ಕೊಳಗಾದ ಈಕೆಯ ತಮ್ಮ ಇನ್ನೂ ಆಘಾತದಿಂದ ಹೊರಬಂದಿಲ್ಲ. ತನ್ನ ಕಲಿಕೆಗೆ ಅಕ್ಕ ಹೇಗೆ ಬೆಂಬಲವಾಗುತ್ತಾಳೆ ಎಂಬ ಬಗ್ಗೆಯೇ ಆತ ಇನ್ನೂ ಕಲ್ಪಿಸಿಕೊಳ್ಳುತ್ತಿದ್ದಾನೆ ಎಂದು ಕೇಜಲ್ ಸಹೋದರ ಪವನ್ ಕುಮಾರ್ ಹೇಳಿದರು.