×
Ad

ತೃಣಮೂಲ ಕಾಂಗ್ರೆಸಿಗರ ಮನೆಗೆ ನುಗ್ಗಿ ಹೊಡೆಯುತ್ತೇವೆ: ಪಶ್ಚಿಮ ಬಂಗಾಳ ಬಿಜೆಪಿಯ ದಿಲೀಪ್ ಘೋಷ್

Update: 2016-05-29 11:59 IST

ಕೋಲ್ಕತಾ, ಮೇ 29: ಪಶ್ಚಿಮ ಬಂಗಾಳದ ಬಿಜೆಪಿ ಪ್ರಮುಖ ದಿಲೀಪ್ ಘೋಷ್ ಅಧಿಕಾರರೂಢ ತೃಣಮೂಲ ಕಾಂಗ್ರೆಸ್‌ಗೆ ಬೆದರಿಕೆ ಹಾಕಿದ್ದು ನಾವು ಅವರ ಮನೆಗೆ ನುಗ್ಗಿ ಹೊಡೆಯಲಿದ್ದೇವೆ ಎಂದು ಗುಡುಗಿದ್ದಾರೆ. ನಾವು ಆರೆಸ್ಸೆಸ್ ಟ್ರೈನಿಂಗ್ ಪಡೆದವರು. ಬರೀ ಕೈಗಳಿಂದ ಕೊರಳನ್ನು ಮುರಿಯಬಲ್ಲೆವು ಎಂದು ಅವರು ಕಿಡಿಕಾರಿದ್ದಾರೆ.

ಎಎನ್‌ಐ ವರದಿಮಾಡಿರುವ ಪ್ರಕಾರ, ದಿಲೀಪ್ ಘೋಷ್ ತೃಣಮೂಲ ಕಾಂಗ್ರೆಸಿಗರಿಗೆ ಸರಬರಾಜಾಗುವ ವಿದ್ಯುತ್, ನೀರನ್ನು ಸ್ಥಗಿತಗೊಳಿಸುತ್ತೇವೆ ಹಾಗೂ ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ. ಅವರು ಏನು ಮಾಡಬಲ್ಲರೆಂದು ನಾವೂ ನೋಡುತ್ತೇವೆ ಎಂದು ಸವಾಲೆಸೆದಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ನಾಯಕ ದಿಲೀಪ್ ಘೋಷ್ ಪಶ್ಚಿಮ ಬಂಗಾಳ ವಿಧಾನಸಭೆಗೆ ಕೇವಲ ಮೂವರು ಬಿಜೆಪಿ ಶಾಸಕರು ಆಯ್ಕೆಯಾಗಿರಬಹುದು. ಆದರೆ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್‌ಗೆ ಸವಾಲೊಡ್ಡಲು ಇವರೇ ಧಾರಾಳ ಸಾಕು ಎಂದೂ ಬೆದರಿಸಿದ್ದಾರೆ.

ಈ ಮೊದಲು ಘೋಷ್ ಇಂತಹ ವಿವಾದಾಸ್ಪದ ಹೇಳಿಕೆಗಳಿಂದ ಪಶ್ಚಿಮ ಬಂಗಾಳದಲ್ಲಿ ಚರ್ಚೆಯಲ್ಲಿದ್ದರು. ಇತ್ತೀಚೆಗಷ್ಟೇ ಜಾಧವಪುರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರನ್ನು ಲಜ್ಜಗೇಡಿಗಳು ಎಂದು ತೆಗಳಿ ವಿವಾದವನ್ನು ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News