×
Ad

ಆರು ಪ್ರಾದೇಶಿಕ ಭಾಷೆಗಳ ಪ್ರಧಾನಿ ಕಚೇರಿಯ ವೆಬ್‌ಸೈಟ್‌ಗೆ ಚಾಲನೆ

Update: 2016-05-29 20:23 IST

ಹೊಸದಿಲ್ಲಿ, ಮೇ 29: ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯ ಅಧಿಕೃತ ವೆಬ್‌ಸೈಟ್ ಈಗ ಬಹುಭಾಷಿಕವಾಗಿದ್ದು, 6 ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ದೇಶಾದ್ಯಂತದ ಜನರನ್ನು ತಲುಪುವುದಕ್ಕಾಗಿ ಗುಜರಾತಿ, ಮರಾಠಿ, ಮಲಯಾಳ ಹಾಗೂ ಬಂಗಾಳಿ ಸಹಿತ 6 ಭಾಷೆಗಳನ್ನು ಅದರಲ್ಲಿ ಅಳವಡಿಸಲಾಗಿದೆ.

ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಚಾಲನೆ ನೀಡಿರುವ ಈ ಜಾಲತಾಣದಲ್ಲಿ ತಮಿಳು ಹಾಗೂ ತೆಲುಗು ಆವೃತ್ತಿಗಳೂ ಇವೆ.

ಈ ಮೊದಲು ಸರಕಾರದ ವಿವಿಧ ಕಾರ್ಯಕ್ರಮಗಳನ್ನು ಬಿಂಬಿಸುವ www.pmindia.gov.in ಜಾಲ ತಾಣವು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರವಿತ್ತು.

ವಿವಿಧ ಭಾಷೆಗಳಲ್ಲಿ ಪಿಎಂಒ ಇಂಡಿಯಾ ಸೈಟ್‌ನ ಹೊಸ ಆವೃತ್ತಿಯ ಸೃಷ್ಟಿಗೆ ದಣಿವರಿಯದೆ ಕೆಲಸ ಮಾಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. 6 ಭಾಷೆಗಳ ಪಿಎಂಒ ಇಂಡಿಯಾ ಸೈಟ್‌ಗೆ ಚಾಲನೆ ನೀಡಿರುವ ಸುಶ್ಮಾ ಸ್ವರಾಜ್‌ಜೀಯವರಿಗೆ ಧನ್ಯವಾದಗಳು. ಈ ತಾಣಗಳು ತಮ್ಮೆಲ್ಲರೊಂದಿಗಿನ ತನ್ನ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿದೆಯೆಂದು ಮೋದಿ ಟ್ವೀಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಶ್ಮಾ, ಸರಕಾರವು ಪ್ರಧಾನಿಯ ಅಧಿಕೃತ ವೆಬ್‌ಸೈಟನ್ನು ಹಂತಹಂತವಾಗಿ ಇತರ ಪ್ರಾದೇಶಿಕ ಭಾಷೆಗಳಲ್ಲೂ ಆರಂಭಿಸಲಿದೆ. ಜನರನ್ನು ತಲುಪಿ, ಅವರದೇ ಭಾಷೆಯಲ್ಲಿ ಸಂವಹನ ನಡೆಸುವ ಪ್ರಧಾನಿಯ ಪ್ರಯತ್ನದ ಭಾಗ ಇದಾಗಿದೆಯೆಂದು ತಿಳಿಸಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಮೋದಿ, ಈ ಭಾಷಾ ವೆಬ್‌ಸೈಟ್‌ಗಳ ಯಾವುದೇ ಭಾಗ ಸರಿಪಡಿಸಬೇಕೆಂದು ತಾವು ಬಯಸಿದಲ್ಲಿ ತಮಗೆ ತಿಳಿಸಿರಿ. ತಮ್ಮ ಅಭಿಪ್ರಾಯಕ್ಕೆ ಸದಾ ಸ್ವಾಗತವಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News