ದ.ಕ.ದಲ್ಲಿ ಅಕ್ರಮ ಮರಳು ದಂಧೆಗಿಲ್ಲ ಕಡಿವಾಣ

Update: 2016-05-29 18:30 GMT

ಬಂಟ್ವಾಳ, ಮೇ 29: ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ಹಾಗೂ ಫಲ್ಗುಣಿ ನದಿ ತೀರಗಳಲ್ಲಿ ಅಕ್ರಮ ಮರಳುಗಾರಿಕೆ ದಂಧೆ ಮಿತಿ ಮೀರಿ ನಡೆಯುತ್ತಿದ್ದು, ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು-ರಾತ್ರಿ ಎನ್ನದೆ ಸಾಲುಗಟ್ಟಿ ಸಂಚರಿಸುತ್ತಿರುವ ಮರಳು ಲಾರಿಗಳು ಇದಕ್ಕೆ ಸಾಕ್ಷಿಯಾಗಿವೆ.

ಮಳೆಗಾಲ ಆರಂಭವಾದ ಬಳಿಕ 4-5 ತಿಂಗಳು ಮರಳುಗಾರಿಕೆ ನಡೆ ಸಲು ಅಸಾಧ್ಯವಾಗುವ ಹಿನ್ನೆಲೆಯಲ್ಲಿ ಮೇ ತಿಂಗಳು ಅಂತ್ಯವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ದಂಧೆ ಜೋರಾಗಿ ನಡೆಯುತ್ತಿದೆ. ಈ ಬಾರಿ ವಿಪರೀತ ಬಿಸಿಲಿನಿಂದ ನೀರು ಬತ್ತಿ ಬರಡಾಗಿರುವ ನೇತ್ರಾವತಿ ನದಿಯಲ್ಲಿ ಸಂಪೂರ್ಣವಾಗಿ ಮರಳು ಗೋಚರಿಸುತ್ತಿದ್ದು, ಇದು ದಂಧೆ ಕೋರರಿಗೆ ವರದಾನವಾದಂತಾಗಿದೆ.

ಮಾನವ ಶ್ರಮದಿಂದಲೇ ಮರಳು ತೆಗೆಯಬೇಕೆಂಬ ನಿಯಮವಿದ್ದರೂ ನೇತ್ರಾವತಿ ಹಾಗೂ ಫಲ್ಗುಣಿ ನದಿ ಯುದ್ದಕ್ಕೂ ಅಕ್ರಮ ಮರಳು ದಂಧೆ ಕೋರರು ದೈತ್ಯ ಜೆಸಿಬಿ, ಹಿಟಾಚಿ ಯಂತ್ರಗಳನ್ನು ನದಿಗೆ ಇಳಿಸಿ ಮರಳು ಗಾರಿಕೆ ನಡೆಸುತ್ತಿರುವುದು ಕಂಡು ಬರುತ್ತಿದೆ. ನದಿಯಿಂದ ತೆಗೆದ ಮರಳನ್ನು ರಾಷ್ಟ್ರೀಯ ಹೆದ್ದಾರಿಯ ಒಳಪ್ರದೇಶಗಳ ವಿಶಾಲವಾದ ಜಾಗದಲ್ಲಿ ಸಂಗ್ರಹಿಸಿ ಅಲ್ಲಿಂದ 10-12 ಚಕ್ರಗಳ ಲಾರಿಗಳಲ್ಲಿ ತುಂಬಿಸಿ ಬೆಂಗಳೂರು, ಮೈಸೂರು ಕಡೆಗೆ ಸಾಗಿಸಲಾಗುತ್ತಿದೆ. ಜಿಲ್ಲೆಯಿಂದ ಹಗಲು ರಾತ್ರಿ ಎನ್ನದೆ ಮರಳು ಸಾಗಾಟವಾಗುತ್ತಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ಮನೆ, ಕಟ್ಟಡ ಸೇರಿದಂತೆ ನಿರ್ಮಾಣ ಕಾರ್ಯಕ್ಕೆ ಮರಳು ಲಭ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ.

ಅಧಿಕ ಲಾಭದ ಉದ್ದೇಶದಿಂದ ಸ್ಥಳೀಯವಾಗಿ ಮರಳು ಮಾರಾಟ ಮಾಡದೆ ದುಪ್ಪಟ್ಟು ಬೆಲೆಗೆ ದೂರದ ಪ್ರದೇಶಗಳಿಗೆ ಸಾಗಾಟ ಮಾಡಲಾಗುತ್ತಿದೆ. ಸ್ಥಳೀಯ ಜನರು ಒಂದು ಲೋಡ್ ಮರಳು ಪಡೆಯಲು ಇನ್ನಿಲ್ಲದ ಕಷ್ಟ ಪಡಬೇಕಾಗಿದೆ. ಅದರಲ್ಲೂ ಉತ್ತಮ ಗುಣಮಟ್ಟದ ಮರಳು ಸ್ಥಳೀಯರಿಗೆ ಲಭ್ಯವಾಗುತ್ತಿಲ್ಲ. ಕಲ್ಲು ಮಿಶ್ರಿತ ಮರಳೇ ಇಲ್ಲಿನ ಜನರಿಗೆ ಗತಿಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಧಿಕ ಲಾಭದ ಉದ್ದೇಶದಿಂದ ಮರಳು ಸಾಗಾಟದ ಲಾರಿಗಳು ನಿಗದಿಗಿಂತ ಹೆಚ್ಚು ಮರಳು ತುಂಬಿಸಿ ಸಾಗಾಟ ಮಾಡುವುದರಿಂದ ಕೆಲವು ಲಾರಿಗಳು ಭಾರ ತಾಳಲಾಗದೆ ಚಕ್ರ ಒಡೆದು ಹೆದ್ದಾರಿಯ ನಡುವೆ ನಿಲ್ಲುತ್ತಿವೆ. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಜೆಸಿಬಿ, ಹಿಟಾಚಿ ಯಂತ್ರದಿಂದ ನೇರವಾಗಿ ಲಾರಿಗೆ ಮರಳು ತುಂಬಿ ಸುವುದರಿಂದ ಹೆದ್ದಾರಿಯಲ್ಲಿ ಸಂಚರಿ ಸುವಾಗ ಲಾರಿಯಿಂದ ರಸ್ತೆಗೆ ನೀರು ಹರಿಯುವುದು ಹಾಗೂ ಮರಳು ಚೆಲ್ಲುತ್ತಿರುವುದರಿಂದ ದ್ವಿಚಕ್ರ ವಾಹನ ಗಳ ಸವಾರರಿಗೆ ಅಪಾಯವನ್ನುಂಟು ಮಾಡುತ್ತಿವೆ.

ಅಧಿಕಾರಿಗಳು ವೌನ: ವರ್ಷದ ಆರಂಭದಲ್ಲಿ ರಾತ್ರಿ ಹೊತ್ತು ಮಾತ್ರ ರಹಸ್ಯವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯು ಎಪ್ರಿಲ್, ಮೇ ತಿಂಗಳಲ್ಲಿ ಹಗಲು ರಾತ್ರಿ ಎನ್ನದೆ ಅಧಿಕಾರಿಗಳ ಕಣ್ಣೆದುರೇ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಭೂ ಮತ್ತು ಗಣಿ ಇಲಾಖಾ ಧಿಕಾರಿಗಳು ವೌನ ವಹಿಸಿದ್ದು, ಇದು ಮರಳು ದಂಧೆಕೋರರೊಂದಿಗೆ ಜಿಲ್ಲೆಯ ಅಧಿಕಾರಿಗಳು ಪರೋಕ್ಷವಾಗಿ ಭಾಗಿಯಾಗಿದ್ದಾರೆ ಎಂಬ ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ನೀಡುತ್ತಿದೆ.

ಅಧಿಕಾರಿಗಳ ಮೇಲೆ ಪ್ರಭಾವಿಗಳ ಸವಾರಿ
ಪ್ರಸ್ತುತ ನೇತ್ರಾವತಿ ಹಾಗೂ ಫಲ್ಗುಣಿ ನದಿತೀರಗಳಲ್ಲಿ ಕಾರ್ಯಾಚರಿಸುತ್ತಿರುವ ಹೆಚ್ಚಿನ ಅಕ್ರಮ ಮರಳು ದಂಧೆಯು ಜಿಲ್ಲೆಯ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳಿಗೆ ಸೇರಿದ್ದಾಗಿದೆ. ಈ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಅಧಿಕಾರಿಗಳನ್ನೇ ನಿಯಂತ್ರಿಸುವವರಾಗಿದ್ದು, ಅಧಿಕಾರಿಗಳಿಗೆ ಆಮಿಷ ಹಾಗೂ ಬೆದರಿಕೆಯನ್ನೊಡ್ಡಿ ತಮ್ಮ ದಂಧೆಯನ್ನು ಮುಂದುವರಿಸುತ್ತಿದ್ದಾರೆ. ಒಂದೊಮ್ಮೆ ಕೆಳಮಟ್ಟದ ಅಧಿಕಾರಿಗಳು ಅಕ್ರಮ ಮರಳು ಲಾರಿಗಳ ವಿರುದ್ಧ ಕ್ರಮ ಕೈಗೊಂಡರೆ ಮೇಲಧಿಕಾರಿಗಳಿಂದ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ.


ಅದಿರು ಲಾರಿಗಳ ನೆನಪು..!

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಅಕ್ರಮ ಮರಳು ಲಾರಿಗಳ ಸಾಲು ಸಾರ್ವಜನಿಕರಿಗೆ ಅದಿರು ಲಾರಿಗಳನ್ನು ನೆನಪಾಗುವಂತೆ ಮಾಡಿದೆ. ಸುರತ್ಕಲ್-ಮಂಗಳೂರು- ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾದ ಬಳಿಕ ಅದಿರು ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅದಿರು ಸಾಗಾಟ ಮಾಡುತ್ತಿದ್ದ ಲಾರಿಗಳು ಇಂದು ಮರಳು ಸಾಗಾಟದಲ್ಲಿ ತೊಡಗಿದ್ದು, ಜನರಿಗೆ ಮತ್ತೊಮ್ಮೆ ಅದಿರು ಸಾಗಾಟದ ಲಾರಿಗಳ ನೆನಪಾಗುವಂತಾಗಿದೆ.

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News